ಪಶ್ಚಿಮ ಏಷ್ಯಾ ಭಾಗದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ತೈಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವು ಭಾರತದಲ್ಲಿ ಗ್ಯಾಸ್ ಬಿಕ್ಕಟ್ಟಿಗೆ ಕಾರಣವಾಗಿದೆ. ಈ ಬೆಳವಣಿಗೆಯಿಂದಾಗಿ ವಾಣಿಜ್ಯ (Commercial) ಸಿಲಿಂಡರ್ಗಳ ಕೊರತೆ ತೀವ್ರಗೊಂಡಿದ್ದು, ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ವಾಣಿಜ್ಯ ಸಿಲಿಂಡರ್ಗಳ ಕೊರತೆ ಎದುರಾಗಿದ್ದು, ಕಾಳಸಂತೆಯಲ್ಲಿ ಒಂದೊಂದು ಸಿಲಿಂಡರ್ ಬೆಲೆ ₹3,000 ರಿಂದ ₹4,000 ವರೆಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಹೋಟೆಲ್ ಬಂದ್ ಭೀತಿ: ಸುಮಾರು 70 ದಿನಗಳವರೆಗೆ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗುವುದಿಲ್ಲ ಎಂದು ತೈಲ ಕಂಪನಿಗಳು ಭರವಸೆ ನೀಡಿದ್ದವು. ಆದರೆ ಈಗ ದಿಢೀರ್ ಸರಬರಾಜು ಸ್ಥಗಿತಗೊಂಡಿರುವುದರಿಂದ ಬೆಂಗಳೂರಿನ ಶೇ. 30ರಷ್ಟು ಹೋಟೆಲ್ಗಳು ಮುಚ್ಚುವ ಹಂತಕ್ಕೆ ತಲುಪಿವೆ. “ಗ್ಯಾಸ್ ಪೂರೈಕೆ ಸ್ಥಗಿತಗೊಂಡಿರುವುದು ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಇದರಿಂದ ಸಾಮಾನ್ಯ ಜನರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಆಸ್ಪತ್ರೆ ರೋಗಿಗಳಿಗೆ ಊಟದ ತೊಂದರೆಯಾಗಲಿದೆ. ತಕ್ಷಣ ಕೇಂದ್ರ ಸಚಿವರು ಮಧ್ಯಪ್ರವೇಶಿಸಿ ಪೂರೈಕೆಯನ್ನು ಸರಿಪಡಿಸಬೇಕು” ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಆಗ್ರಹಿಸಿದೆ.
ಬದಲಾದ ಮೆನು: ಗ್ಯಾಸ್ ಉಳಿತಾಯ ಮಾಡಲು ಅನೇಕ ಹೋಟೆಲ್ಗಳಲ್ಲಿ ಈಗಾಗ್ಲೇ ದೋಸೆ ಸೇರಿದಂತೆ ಹೆಚ್ಚು ಗ್ಯಾಸ್ ಬಳಸುವ ತಿಂಡಿಗಳನ್ನು ಸ್ಥಗಿತಗೊಳಿಸಿ, ಕೇವಲ ಟೀ, ಕಾಫಿ ಮತ್ತು ಲಿಮಿಟೆಡ್ ಊಟಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ.
ಗೃಹಬಳಕೆಗೂ ನಿಯಮ: ಸರ್ಕಾರವು ಗೃಹ ಬಳಕೆದಾರರಿಗೆ ಸಿಲಿಂಡರ್ ಕಾಯ್ದಿರಿಸುವಿಕೆಗೆ (Booking) 25 ದಿನಗಳ ಕಡ್ಡಾಯ ಅಂತರ ಇರುವಂತೆ ಹೊಸ ನಿಯಮ ಜಾರಿಗೆ ತಂದಿದೆ. ತೈಲ ಬೆಲೆ ಏರಿಕೆ ಮತ್ತು ಕೊರತೆಯಿಂದಾಗಿ ರಾಜ್ಯದಲ್ಲಿ ಆಹಾರ ಪದಾರ್ಥಗಳ ಬೆಲೆ ಕೂಡ ಶೇ. 10 ರಿಂದ 20 ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

