ಬೆಂಗಳೂರು: ಮಾಜಿ ಸೈನಿಕರ ಕೋಟಾದಡಿ ನಿವೇಶನ ಕೋರಿ ಸಲ್ಲಿಕೆಯಾಗಿರುವ ಬಾಕಿ ಅರ್ಜಿಗಳನ್ನು ಪರಿಗಣಿಸಿ ವರ್ಷಾಂತದೊಳಗೆ ಬಡಾವಣೆ ನಿರ್ಮಿಸಿ ನಿವೇಶನ ಮಂಜೂರು ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಬಿ.ಪಿ. ಹರೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಾಜಿ ಸೈನಿಕರ ಕೋಟಾದಡಿ ನಿವೇಶನ ಕೋರಿ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಅರ್ಜಿಗಳು ಬಾಕಿ ಇದೆ ಎಂಬುದನ್ನು ಪರಿಗಣಿಸಿ ವರ್ಷಾಂತ್ಯದೊಳಗೆ ಬಡಾವಣೆ ನಿರ್ಮಿಸಿ ನಿವೇಶನ ಮಂಜೂರು ಮಾಡಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದ್ಯಂತ ಎಲ್ಲಾ ಮಾಜಿ ಸೈನಿಕರಿಗೆ ಅರ್ಹತೆ ಆಧಾರದಲ್ಲಿ ನಿವೇಶನ ನೀಡಬೇಕೆನ್ನುವುದು ಸರ್ಕಾರದ ಇಚ್ಛೆಯಾಗಿದೆ. ಆದರೆ ಈ ಯೋಜನೆ ಅನುಷ್ಠಾನಕ್ಕೆ ಜಮೀನಿನ ಅಗತ್ಯವಿದ್ದು, ವಾಸ ಯೋಗ್ಯ ಸ್ಥಳ ಗುರುತಿಸಿ ಬಡಾವಣೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಯಾವ ತಾಲೂಕು ಯಾವ ಜಿಲ್ಲೆಯಲ್ಲಿ ಎಷ್ಟು ಜನ ಮಾಜಿ ಸೈನಿಕರು ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಮಾಹಿತಿ ಇದೆ. ವರ್ಷಾಂತ್ಯದೊಳಗೆ ಮಾಜಿ ಸೈನಿಕರಿಗೆ ನಿವೇಶನ ನೀಡಲಾಗುವುದು. ದಾವಣಗೆರೆ ಜಿಲ್ಲೆಯಲ್ಲಿ 338 ಮಂದಿ ಮಾಜಿ ಸೈನಿಕರು ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 14 ಎಕರೆ ಜಾಗ ಗುರುತಿಸಿದ್ದು, ಕನಿಷ್ಠ 350 ನಿವೇಶನ ನಿರ್ಮಿಸಬಹುದು ಎಂದು ಹೇಳಿದ್ದಾರೆ.

