ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸೀರೆ ಕೊಡುವುದಾಗಿ ಘೋಷಿಸಿದ್ದಾರೆ. ನಮಗೆ ಸೀರೆ ಬೇಡ, ಕನಿಷ್ಠ ವೇತನ ನೀಡಬೇಕು. ಇಲ್ಲದಿದ್ದರೆ ಗೌರವಧನ ಹೆಚ್ಚಳ ಮಾಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಸುನಂದಮ್ಮ ರೇವಣಕರ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕನಿಷ್ಠ ವೇತನ ನೀಡದಿದ್ದಲ್ಲಿ, ಗೌರವಧನ ಹೆಚ್ಚಳ ಮಾಡದಿದ್ದಲ್ಲಿ ಸರ್ಕಾರಕ್ಕೆ ಸೀರೆ ವಾಪಸ್ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಹೊರಡಿಸಿದ್ದ ಚುನಾವಣಾ ಪ್ರಣಾಳಿಕೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ರೂ., ಸಹಾಯಕಿಯರಿಗೆ 10 ಸಾವಿರ ರೂ. ಕನಿಷ್ಠ ವೇತನ ನೀಡುವ ಭರವಸೆ ನೀಡಲಾಗಿತ್ತು. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿದ್ದರು. ಆದರೆ, ಈ ಬಜೆಟ್ ನಲ್ಲಿಯೂ ಕನಿಷ್ಠ ವೇತನ ಕೊಡದೆ, ಗೌರವಧನ ಹೆಚ್ಚಳ ಮಾಡದೆ ಸೀರೆ ಕೊಡುವುದಾಗಿ ಘೋಷಿಸಿದ್ದಾರೆ. ನಾವು ಎಂದು ಸೀರೆ ಕೊಡಿ ಎಂದು ಎಂದೂ ಕೇಳಿಲ್ಲ. ಸರ್ಕಾರ ಗೌರವಧನ ಹೆಚ್ಚಳ ಮಾಡದಿದ್ದಲ್ಲಿ, ಕನಿಷ್ಠ ವೇತನ ಕೊಡದಿದ್ದಲ್ಲಿ ಸೀರೆ ವಾಪಸ್ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.

