ಅಹಮದಾಬಾದ್: ವಿಶ್ವಕ್ರಿಕೆಟ್‌ನಲ್ಲಿ ಭಾರತ ಮತ್ತೆ ಅಧಿಪತಿ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಧೂಳೀಪಟ ಮಾಡಿದ ಟೀಮ್ ಇಂಡಿಯಾ ದಾಖಲೆಯ ಮೂರನೇ ಬಾರಿಗೆ ಟಿ20 ವಿಶ್ವಕಪ್ ಮುಕುಟ ಮುಡಿಗೇರಿಸಿಕೊಂಡಿದೆ. ಗೆಲುವಿನ ಬೆನ್ನಲ್ಲೇ ಮೈದಾನದಲ್ಲಿ ವಿಜಯೋತ್ಸವ ಆಚರಿಸಿದ ತಂಡ ಬಳಿಕ ದೈವಿಕ ಭಕ್ತಿಯಲ್ಲಿ ಮಿಂದೆದ್ದಿದೆ.
ವಿಶ್ವಕಪ್ ಗೆದ್ದ ಬೆನ್ನಲ್ಲೇ ಹನುಮಂತನ ಮೊರೆ ಹೋದ ಚಾಂಪಿಯನ್ಸ್
ಪಂದ್ಯ ಮುಗಿದ ತಕ್ಷಣ ನಾಯಕ ಸೂರ್ಯಕುಮಾರ್ ಯಾದವ್, ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಸ್ಟೇಡಿಯಂ ಸಂಕೀರ್ಣದಲ್ಲಿರುವ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿದರು. ವಿಶ್ವಕಪ್ ಟ್ರೋಫಿಯನ್ನು ಕೈಯಲ್ಲಿ ಹಿಡಿದು ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ ಸೂರ್ಯಕುಮಾರ್, ಈ ಐತಿಹಾಸಿಕ ಗೆಲುವಿಗೆ ಕೃತಜ್ಞತೆ ಸಲ್ಲಿಸಿದರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿರುವ ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ
https://www.instagram.com/reel/DVqNt4eER7H/?utm_source=ig_web_copy_link&igsh=MzRlODBiNWFlZA==
ಬ್ಯಾಟಿಂಗ್-ಬೌಲಿಂಗ್‌ನಲ್ಲಿ ದಾಖಲೆಗಳ ಸುರಿಮಳೆ
ಫೈನಲ್ ಪಂದ್ಯದಲ್ಲಿ ಭಾರತೀಯ ಆಟಗಾರರು ದಾಖಲೆಗಳ ಮಳೆ ಹರಿಸಿದರು.ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಅಭಿಷೇಕ್ ಶರ್ಮಾ (52), ಇಶಾನ್ ಕಿಶನ್ (54) ಮತ್ತು ಸ್ಯಾಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 255 ರನ್ ಕಲೆಹಾಕಿತು. ಇದು ಟಿ20 ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ
ಬುಮ್ರಾ-ಅಕ್ಷರ್ ಮಾರಕ ದಾಳಿ: 256 ರನ್‌ಗಳ ಗುರಿ ಬೆನ್ನತ್ತಿದ ಕಿವೀಸ್ ಪಡೆಗೆ ಜಸ್ಪ್ರಿತ್ ಬುಮ್ರಾ (4 ವಿಕೆಟ್) ಮತ್ತು ಅಕ್ಷರ್ ಪಟೇಲ್ (3 ವಿಕೆಟ್) ಸಿಂಹಸ್ವಪ್ನವಾದರು. ನ್ಯೂಜಿಲೆಂಡ್ ತಂಡ ಕೇವಲ 159 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತ 96 ರನ್‌ಗಳ ಭರ್ಜರಿ ಜಯ ಸಾಧಿಸಿತು.
ರಾತ್ರಿಯಿಡೀ ಅಹಮದಾಬಾದ್‌ನಲ್ಲಿ ಜಾಗರಣೆ
ಭಾರತ ವಿಶ್ವಕಪ್ ಗೆಲ್ಲುತ್ತಿದ್ದಂತೆ ಅಹಮದಾಬಾದ್ ನಗರವೇ ಪಟಾಕಿಗಳ ಸದ್ದಿನಿಂದ ಮಿನುಗಿತು. ರಾತ್ರಿ 2:30 ಆದರೂ ಅಭಿಮಾನಿಗಳು ರಸ್ತೆಗಳಲ್ಲಿ ಭಾಂಗ್ರಾ ನೃತ್ಯ ಮಾಡುತ್ತಾ ಇಂಡಿಯಾ ಇಂಡಿಯಾ ಎಂದು ಘೋಷಣೆ ಹಾಕುತ್ತಿದ್ದರು. ಆಟಗಾರರು ಮೈದಾನದ ಸುತ್ತ ವಿಕ್ಟರಿ ಲ್ಯಾಪ್ ಹಾಕಿ ಅಭಿಮಾನಿಗಳ ಪ್ರೀತಿಗೆ ಕೈಮುಗಿದರು.
ತವರು ನೆಲದಲ್ಲಿ ವಿಶ್ವಕಪ್ ಗೆದ್ದ ಮತ್ತು ಪ್ರಶಸ್ತಿಯನ್ನು ಯಶಸ್ವಿಯಾಗಿ ಸಮರ್ಥಿಸಿಕೊಂಡ (Defend) ಜಗತ್ತಿನ ಮೊದಲ ತಂಡ ಎಂಬ ಕೀರ್ತಿಗೆ ಈಗ ಭಾರತ ಪಾತ್ರವಾಗಿದೆ.

