ಜನಪ್ರಿಯ ಯೂಟ್ಯೂಬರ್ ಮತ್ತು ಬಿಗ್ ಬಾಸ್ ಮಾಜಿ ಸ್ಪರ್ಧಿ ಅನುರಾಗ್ ಡೋಬಾಲ್ (UK07 Rider), ದೆಹಲಿ-ಮೀರತ್ ಎಕ್ಸ್ಪ್ರೆಸ್ವೇನಲ್ಲಿ ನಡೆಸಿದ ಲೈವ್ ಸ್ಟ್ರೀಮ್ ವೇಳೆ ಭೀಕರ ಅಪಘಾತಕ್ಕೆ ಈಡಾಗಿದ್ದಾರೆ. ಸುಮಾರು 140 ರಿಂದ 150 ಕಿ.ಮೀ ವೇಗದಲ್ಲಿ ಅತಿ ವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದ ಅವರು, ಉದ್ದೇಶಪೂರ್ವಕವಾಗಿಯೇ ರಸ್ತೆ ವಿಭಾಜಕಕ್ಕೆ (ಡಿವೈಡರ್) ತಮ್ಮ ಫಾರ್ಚುನರ್ ಕಾರನ್ನು ಡಿಕ್ಕಿ ಹೊಡೆಸಿದ್ದಾರೆ. ಈ ಆಘಾತಕಾರಿ ದೃಶ್ಯವನ್ನು ಸುಮಾರು 82,000 ಜನರು ನೇರವಾಗಿ ವೀಕ್ಷಿಸುತ್ತಿದ್ದರು.
ಕುಟುಂಬದ ವಿರುದ್ಧ ಗಂಭೀರ ಆರೋಪ ಅಪಘಾತಕ್ಕೂ ಮುನ್ನ ಅನುರಾಗ್ ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎನ್ನಲಾಗಿದೆ. ಲೈವ್ ಸ್ಟ್ರೀಮಿಂಗ್ ವೇಳೆ ತಮ್ಮ ಕುಟುಂಬದವರು ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಮತ್ತು ತಾವು ಅನುಭವಿಸುತ್ತಿರುವ ಖಿನ್ನತೆಗೆ ಅವರೇ ಕಾರಣ ಎಂದು ಆರೋಪಿಸುತ್ತಿದ್ದರು. “ಮುಂದಿನ ಜನ್ಮದಲ್ಲಿ ಬಂದಾಗಲಾದರೂ ನನಗೆ ಪ್ರೀತಿ ಕೊಡಿ ಅಮ್ಮ, ನನಗೆ ಪ್ರೀತಿಯ ಅಗತ್ಯವಿತ್ತು” ಎಂದು ಹೇಳುತ್ತಾ ಭಾವುಕರಾಗಿದ್ದ ಅವರು, ಏಕಾಏಕಿ ಕಾರನ್ನು ಡಿಕ್ಕಿ ಹೊಡೆಸಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರೂ, ಆ ಕ್ಷಣದಲ್ಲಿ ಅವರು ಅನುಭವಿಸುತ್ತಿದ್ದ ಒಂಟಿತನ ಮತ್ತು ನೋವು ನೆಟ್ಟಿಗರ ಕಣ್ಣೀರಿಸುವಂತಿದೆ.
ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಮತ್ತು ಪೊಲೀಸರು ಅನುರಾಗ್ ಅವರನ್ನು ಮೀರತ್ನ ಸುಭಾರತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಅವರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಈ ಘಟನೆಗೂ ಮುನ್ನ ಅನುರಾಗ್ ‘Last Message’ ಎಂಬ ಶೀರ್ಷಿಕೆಯಡಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ತಮ್ಮ ಪ್ರೇಮ ವಿವಾಹಕ್ಕೆ ಪೋಷಕರು ಅಡ್ಡಿಪಡಿಸುತ್ತಿದ್ದಾರೆ ಮತ್ತು ಆ ಕಾರಣದಿಂದ ತಮ್ಮ ಗೆಳತಿ ಕೂಡ ದೂರವಾಗಿದ್ದಾಳೆ ಎಂದು ನೋವು ತೋಡಿಕೊಂಡಿದ್ದರು.
ಯಶಸ್ಸಿನ ಹಿಂದಿನ ಕರಾಳ ಮುಖ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಯಶಸ್ಸು ಮತ್ತು ಹಣ ಗಳಿಸಿದ್ದರೂ, ಮಾನಸಿಕ ಆರೋಗ್ಯ ಎಷ್ಟು ಮುಖ್ಯ ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ. ಸಾವಿರಾರು ಜನರು ಲೈವ್ನಲ್ಲಿ ಸಮಾಧಾನಪಡಿಸಲು ಪ್ರಯತ್ನಿಸಿದರೂ, ಅನುರಾಗ್ ಅವರ ಮನಸ್ಸಿನಲ್ಲಿದ್ದ ಅಶಾಂತಿ ಈ ದುರಂತಕ್ಕೆ ಕಾರಣವಾಗಿದೆ. ಖ್ಯಾತಿ ಮತ್ತು ಯಶಸ್ಸು ಎಲ್ಲವನ್ನೂ ನೀಡಬಲ್ಲದು, ಆದರೆ ಮಾನಸಿಕ ನೆಮ್ಮದಿ ಇಲ್ಲದಿದ್ದರೆ ಜೀವನ ಎಷ್ಟು ಕಷ್ಟವಾಗುತ್ತದೆ ಎಂಬುದನ್ನು ಈ ಘಟನೆ ತೋರಿಸಿಕೊಟ್ಟಿದೆ.

