ಗದಗ: ಲಕ್ಕುಂಡಿ ಸಮೀಪ ಕಣಗಿನಹಾಳ ರಸ್ತೆಯ ಜಮೀನೊಂದರ ಗಣಿಗಾರಿಕೆ ಹೊಂಡದಲ್ಲಿ ಸ್ನಾನಕ್ಕೆ ಇಳಿದ ನರ್ಸಿಂಗ್ ವಿದ್ಯಾರ್ಥಿ ಮೃತಪಟ್ಟಿದ್ದಾರೆ.
ಶನಿವಾರ ರಂಗ ಪಂಚಮಿಯ ಬಣ್ಣದಾಟ ಆಡಿದ ನಂತರ ಸ್ನಾನಕ್ಕೆ ಹೋದಾಗ ಘಟನೆ ನಡೆದಿದ್ದು, ಭಾನುವಾರ ಮೃತದೇಹ ಹೊರ ತೆಗೆಯಲಾಗಿದೆ. ಗದಗದ ಜಿಮ್ಸ್ ನಲ್ಲಿ ನಾಲ್ಕನೇ ವರ್ಷದ ನರ್ಸಿಂಗ್ ಶಿಕ್ಷಣ ಪಡೆಯುತ್ತಿದ್ದ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ನೇಗಿನಹಾಳ ಗ್ರಾಮದ ಆದಿತ್ಯ(24) ಮೃತಪಟ್ಟ ವಿದ್ಯಾರ್ಥಿ.
ಗದಗದಲ್ಲಿ ಹೋಳಿ ಹಬ್ಬ ಆಚರಿಸಿದ ನಂತರ ಸ್ನೇಹಿತರೊಂದಿಗೆ ಲಕ್ಕುಂಡಿಯಿಂದ ಸುಮಾರು 3 ಕಿ.ಮೀ. ದೂರದಲ್ಲಿರುವ ಮುಲ್ಲಾನಹಳ್ಳಿ ಹೊಂದಿಕೊಂಡ ಜಮೀನೊಂದರಲ್ಲಿ ಗಣಿಗಾರಿಕೆಗೆ ತೆಗೆದ ಹೊಂಡದಲ್ಲಿ ಸ್ನಾನಕ್ಕೆ ತೆರಳಿದ್ದಾರೆ. ಈ ವೇಳೆ ಆದಿತ್ಯ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಶನಿವಾರ ಸಂಜೆ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡರೂ ಮೃತದೇಹ ಪತ್ತೆಯಾಗಿರಲಿಲ್ಲ. ಭಾನುವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ನಡೆಸಿ ಮೃತದೇಹ ಹೊರ ತೆಗೆಯಲಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

