ಬೆಂಗಳೂರು: ಯುಗಾದಿ ಹಬ್ಬದ ನಂತರ ಹೊಸ ತೊಡಕು ಹಬ್ಬದ ದಿನವೇ 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ದ್ವಿತೀಯ ಸಂಕಲನಾತ್ಮಕ ಮೌಲ್ಯಾಂಕನ ಪರೀಕ್ಷೆ(ಎಸ್ಎ-2) ನಿಗದಿಪಡಿಸಿದ್ದು, ಇದನ್ನು ಮುಂದೂಡುವಂತೆ ಒತ್ತಾಯ ಕೇಳಿ ಬಂದಿದೆ.
ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್ 20ರಂದು ಬೆಳಗ್ಗೆ 11:30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪ್ರಥಮ ಭಾಷೆ ಕನ್ನಡ ವಿಷಯ ನಿಗದಿಪಡಿಸಲಾಗಿದ್ದು, ಹಬ್ಬದ ದಿನವೇ ಪರೀಕ್ಷೆ ದಿನಾಂಕ ನಿಗದಿಪಡಿಸಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.
ಜಾಲತಾಣಗಳಲ್ಲಿಯೂ ಈ ಕುರಿತಾಗಿ ಚರ್ಚೆ ನಡೆಯುತ್ತಿದೆ. ಮಾರ್ಚ್ 19 ರಂದು ಯುಗಾದಿ ಹಬ್ಬ ಇದ್ದು, ಮರುದಿನ ಮಾರ್ಚ್ 20ರಂದು ಹೊಸ ತೊಡಕು ಹಬ್ಬ ಇದೆ. ಅದೇ ದಿನ ಪರೀಕ್ಷೆ ನಿಗದಿ ಮಾಡಿರುವುದನ್ನು ಮುಂದೂಡಬೇಕು. ಚಂದ್ರನ ದರ್ಶನ ಮಾಡಿದ ನಂತರ ರಾಜ್ಯದ ಬಹುತೇಕ ಭಾಗಗಳಲ್ಲಿ ಹೊಸ ತೊಡಕು ಹಬ್ಬ ಮಾಡಿ ಮಾಂಸದೂಟ ಸವಿಯಲಾಗುತ್ತದೆ. ವಿದ್ಯಾರ್ಥಿಗಳಿಗೆ ಹಬ್ಬದ ದಿನವೇ ಪರೀಕ್ಷೆ ಇದ್ದು, ಇದನ್ನು ಮುಂದೂಡಬೇಕೆಂಬ ಒತ್ತಾಯ ಕೇಳಿ ಬಂದಿದೆ.

