ಕಾಲಿವುಡ್‌ನ ‘ದಳಪತಿ’ ವಿಜಯ್ ಅವರ ವೈಯಕ್ತಿಕ ಜೀವನದಲ್ಲಿನ ಬಿರುಗಾಳಿ ಈಗ ನ್ಯಾಯಾಲಯದ ಅಂಗಳದಲ್ಲಿ ಹೊಸ ತಿರುವು ಪಡೆದುಕೊಂಡಿದೆ. ಸುಮಾರು 27 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಲು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಪತ್ನಿ ಸಂಗೀತಾ ಸ್ವರ್ಣಲಿಂಗಂ, ಈಗ ತಮ್ಮ ವಾಸಿಸುವ ಹಕ್ಕಿಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ.
ಹೌದು. ಕಾಲಿವುಡ್‌ನ ‘ದಳಪತಿ’ ವಿಜಯ್ ಅವರ ವೈಯಕ್ತಿಕ ಜೀವನದಲ್ಲಿನ ಬಿರುಗಾಳಿ ಈಗ ನ್ಯಾಯಾಲಯದ ಅಂಗಳದಲ್ಲಿ ಹೊಸ ತಿರುವು ಪಡೆದುಕೊಂಡಿದೆ. ಸುಮಾರು 27 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಲು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಪತ್ನಿ ಸಂಗೀತಾ ಸ್ವರ್ಣಲಿಂಗಂ, ಈಗ ತಮ್ಮ ವಾಸಿಸುವ ಹಕ್ಕಿಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ.
“ನನ್ನನ್ನು ಪ್ರಸ್ತುತ ವಾಸವಿರುವ ವೈವಾಹಿಕ ಮನೆಯಿಂದ ಹೊರಹಾಕುವ ಸಾಧ್ಯತೆಯಿದೆ” ಎಂಬ ಆತಂಕ ವ್ಯಕ್ತಪಡಿಸಿರುವ ಅವರು, ಪ್ರಕರಣ ಇತ್ಯರ್ಥವಾಗುವವರೆಗೂ ತಮಗೆ ಅದೇ ಮನೆಯಲ್ಲಿ ವಾಸಿಸಲು ಕಾನೂನು ರಕ್ಷಣೆ ನೀಡಬೇಕು ಎಂದು ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದಾರೆ. ಪರಸ್ತ್ರೀ ಸಂಬಂಧ ಮತ್ತು ಮಾನಸಿಕ ಕ್ರೌರ್ಯದ ಗಂಭೀರ ಆರೋಪಗಳ ನಡುವೆ ನಡೆದಿರುವ ಈ ಕಾನೂನು ಹೋರಾಟವು ಇದೀಗ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.
ನಟ ದಳಪತಿ ವಿಜಯ್ ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ, ತಮ್ಮ ನಡೆಯುತ್ತಿರುವ ವಿಚ್ಛೇದನ ಪ್ರಕರಣದ ನಡುವೆ ನ್ಯಾಯಾಲಯಕ್ಕೆ ಹೊಸ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ತಮ್ಮ ವೈವಾಹಿಕ ಮನೆಯಲ್ಲಿ ವಾಸಿಸುವ ಹಕ್ಕನ್ನು ಎತ್ತಿಹಿಡಿಯಲು ಅವರು ಮಧ್ಯಂತರ ಆದೇಶವನ್ನು ಕೋರಿದ್ದಾರೆ.
ಹೊಸ ಅರ್ಜಿಯಲ್ಲಿ ಏನಿದೆ?
ಸಂಗೀತಾ ಅವರು ಸಲ್ಲಿಸಿರುವ ಇತ್ತೀಚಿನ ಅರ್ಜಿಯಲ್ಲಿ, ಪ್ರಸ್ತುತ ತಾವು ವಾಸಿಸುತ್ತಿರುವ ವೈವಾಹಿಕ ಮನೆಯಿಂದ ತಮ್ಮನ್ನು ಹೊರಹಾಕುವ ಅಥವಾ ವಸತಿ ನಿರಾಕರಿಸುವ ಸಾಧ್ಯತೆಯಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಆದ್ದರಿಂದ, ಪ್ರಕರಣ ಇತ್ಯರ್ಥವಾಗುವವರೆಗೆ ಅದೇ ಮನೆಯಲ್ಲಿ ವಾಸಿಸಲು ಕಾನೂನು ರಕ್ಷಣೆ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ವಿಚ್ಛೇದನಕ್ಕೆ ಕಾರಣವೇನು?
ಸುಮಾರು 27 ವರ್ಷಗಳ ದಾಂಪತ್ಯ ಜೀವನದ ನಂತರ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆಗಸ್ಟ್ 1999 ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಸಂಗೀತಾ ಅವರು ತಮ್ಮ ಅರ್ಜಿಯಲ್ಲಿ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿದ್ದಾರೆ:
ಪರಸ್ತ್ರೀ ಸಂಬಂಧದ ಆರೋಪ: ವಿಜಯ್ ಅವರು ಸಹ ನಟಿಯೊಬ್ಬರ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಸಂಗೀತಾ ಆರೋಪಿಸಿದ್ದಾರೆ. 2021 ರಲ್ಲಿ ಈ ವಿಷಯ ತಮಗೆ ತಿಳಿಯಿತು ಎಂದು ಅವರು ಹೇಳಿದ್ದಾರೆ.
ಸಾಮಾಜಿಕವಾಗಿ ಕಡೆಗಣನೆ: ಈ ಸಂಬಂಧವನ್ನು ಕೊನೆಗೊಳಿಸುವುದಾಗಿ ವಿಜಯ್ ಭರವಸೆ ನೀಡಿದ್ದರೂ, ಅದು ಮುಂದುವರಿಯಿತು ಮತ್ತು ವಿಜಯ್ ತಮ್ಮನ್ನು ಸಾಮಾಜಿಕ ಹಾಗೂ ವೃತ್ತಿಪರ ಜೀವನದಿಂದ ದೂರ ಇಡಲಾರಂಭಿಸಿದರು ಎಂದು ಸಂಗೀತಾ ದೂರಿದ್ದಾರೆ.
ಸಾರ್ವಜನಿಕ ಮುಜುಗರ: ವಿಜಯ್ ಅವರು ಸದರಿ ನಟಿಯ ಜೊತೆ ವಿದೇಶ ಪ್ರವಾಸ ಕೈಗೊಂಡಿರುವುದು ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ತಮಗೆ ಮತ್ತು ಮಕ್ಕಳಿಗೆ ಅಪಮಾನ ಉಂಟುಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ಕಾನೂನು ಕ್ರಮ
ವಿಶೇಷ ವಿವಾಹ ಕಾಯ್ದೆ, 1954 ರ ಅಡಿಯಲ್ಲಿ ಸಂಗೀತಾ ಅವರು ‘ವ್ಯಭಿಚಾರ’ ಮತ್ತು ‘ಕ್ರೌರ್ಯ’ದ ಆಧಾರದ ಮೇಲೆ ವಿಚ್ಛೇದನ ಕೋರಿದ್ದಾರೆ. ಈ ಘಟನೆಗಳಿಂದ ತಮಗೆ ತೀವ್ರ ಮಾನಸಿಕ ಅಶಾಂತಿಯಾಗಿದೆ ಎಂದು ಅವರು ವಾದಿಸಿದ್ದಾರೆ. ಪ್ರಸ್ತುತ ಈ ಪ್ರಕರಣವು ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ.

