ಬೆಂಗಳೂರು ನಗರದಲ್ಲಿ ಹಲವು ಐಟಿ ಕಂಪನಿಗಳು ವಾರದಲ್ಲಿ ಕೆಲವು ದಿನ ಕಚೇಯಿಂದ ಕೆಲಸ ಮಾಡಬೇಕು ಎಂದು ಉದ್ಯೋಗಿಗಳಿಗೆ ಸೂಚನೆ ನೀಡುತ್ತಿವೆ. 2025ರ ಡಿಸೆಂಬರ್‌ನಿಂದ ಇದು ಕಡ್ಡಾಯವಾಗಿಯೂ ಜಾರಿಗೆ ಬರುತ್ತಿದೆ. ಈಗ ಇನ್ಫೋಸಿಸ್ ಈ ಕುರಿತು ಸೂಚನೆಯೊಂದನ್ನು ಕೊಟ್ಟಿದೆ.
ಇನ್ಫೋಸಿಸ್ ಕಚೇರಿಯಲ್ಲಿ ಉದ್ಯೋಗಿಗಳ ಹಾಜರಾತಿಯನ್ನು ಹೆಚ್ಚಿಸಲು ಸಾಫ್ಟ್‌ವೇರ್ ಸಂಸ್ಥೆಯು ಕೈಗೊಂಡಿರುವ ಇತ್ತೀಚಿನ ಕ್ರಮಗಳಲ್ಲಿ ಇದು ಒಂದಾಗಿದೆ. ಇತರ ಸಂಸ್ಥೆಗಳು ಕೂಡ ಕಚೇರಿಗೆ ಮರಳುವ ನಿಯಮಗಳನ್ನು ಬಿಗಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಇನ್ಫೋಸಿಸ್‌ನಲ್ಲೂ ಈ ಬೆಳವಣಿಗೆ ನಡೆದಿದೆ.
ಇನ್ಫೋಸಿಸ್ ವಾರದಲ್ಲಿ 4 ದಿನ ಕಡ್ಡಾಯವಾಗಿ ಕಚೇರಿಯಿಂದ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದೆ. ಈ ಕುರಿತು ಉನ್ನತ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಲೆವೆಲ್ 6+ (ಜೆಎಲ್ 6ಎ) ಹಂತದ ಉದ್ಯೋಗಿಗಳಿಗೆ ಇದು ಅನ್ವಯವಾಗಲಿದೆ.
ಈ ಹಿಂದೆ ಇನ್ಫೋಸಿಸ್ ಜೆಎಲ್7 (JL7) ಮತ್ತು ಅದಕ್ಕಿಂತ ಮೇಲಿನ ಹಂತದ ಉದ್ಯೋಗಿಗಳು ವಾರಕ್ಕೆ 4 ದಿನ ಕಚೇರಿಯಿಂದಲೇ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿತ್ತು. ಇದೀಗ ಕಂಪನಿಯು ಈ ನಿಯಮವನ್ನು ಜೆಎಲ್6 (JL6) ಹಂತದ ಉದ್ಯೋಗಿಗಳಿಗೂ ವಿಸ್ತರಿಸಿದ್ದು, ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿದೆ.
ಹೈಬ್ರಿಡ್ ಮಾದರಿಯ ಅಡಿಯಲ್ಲಿ ನಿಗದಿಪಡಿಸಲಾದ ಕನಿಷ್ಠ ಕಚೇರಿ ಹಾಜರಾತಿಯನ್ನು ಕೆಲವು ತಂಡಗಳು ಪೂರೈಸುತ್ತಿಲ್ಲ ಎಂದು ಉದ್ಯೋಗಿಗಳಿಗೆ ಕಳುಹಿಸಿದ ಆಂತರಿಕ ಸಂವಹನದಲ್ಲಿ ತಿಳಿಸಲಾಗಿದೆ. ಪರಿಷ್ಕೃತ ನಿಯಮವು ಹಿರಿಯ ಸಿಬ್ಬಂದಿಗಳ ಉಪಸ್ಥಿತಿಯನ್ನು ಕೆಲಸದ ಸ್ಥಳದಲ್ಲಿ ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹೊಸ ನಿಯಮದ ವಿವರಗಳು: ಈ ಹೊಸ ನಿಯಮದಂತೆ ಮ್ಯಾನೇಜರ್ ಹಂತದವರು ಕಚೇರಿಯಲ್ಲಿ ಕೆಲಸ ಮಾಡಬೇಕಿದೆ. ಅವರು ಕ್ಲೈಂಟ್ ಜೊತೆಗಿನ ವ್ಯವಹಾರದ ಮೇಲ್ವಿಚಾರಣೆಯನ್ನು ಕಚೇರಿಯಿಂದಲೇ ಮಾಡಬೇಕಿದೆ ಮತ್ತು ತಂಡಗಳನ್ನು ಸಮನ್ವಯಗೊಳಿಸುವ ಕೆಲಸವನ್ನು ಮಾಡಬೇಕಿದೆ.
ಕಚೇರಿಯಲ್ಲಿ ಹೆಚ್ಚಿನ ಹಾಜರಾತಿ ಇರುವುದರಿಂದ ಶೀಘ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಎಲ್ಲರೂ ಒಟ್ಟಾಗಿ ಕೆಲಸ ಮಾಡಲು ಬೆಂಬಲ ಸಿಗುತ್ತದೆ ಎಂದು ಕಂಪನಿಯು ನಿರೀಕ್ಷಿಸಿದೆ ಎಂದು ಇ-ಮೇಲ್ ಹೇಳಿದೆ.
ಕೋವಿಡ್ ಸಾಂಕ್ರಾಮಿಕದ ನಂತರ ಕಚೇರಿಗಳನ್ನು ಪುನರಾರಂಭಿಸಿದ ಇನ್ಫೋಸಿಸ್, ಹೈಬ್ರಿಡ್ ಮಾದರಿಯನ್ನು ಅಳವಡಿಸಿಕೊಂಡಿದೆ. ಈ ವ್ಯವಸ್ಥೆಯು ವಿವಿಧ ಉದ್ಯೋಗದ ಹಂತಗಳಿಗೆ ಅನುಗುಣವಾಗಿ ಮನೆಯಿಂದ ಕೆಲಸ ಮಾಡುವ ಮಿತಿಗಳನ್ನು ಸ್ಪಷ್ಟವಾಗಿ ನಿಗದಿಪಡಿಸಿದೆ.
- ಮೊದಲ ಮತ್ತು ಮಧ್ಯಮ ಹಂತದ ಉದ್ಯೋಗಿಗಳು (Entry- and mid-level): ತಿಂಗಳಿಗೆ ಕನಿಷ್ಠ 10 ದಿನ ಕಚೇರಿಯಿಂದ ಕೆಲಸ ಮಾಡುವುದು ಕಡ್ಡಾಯ.
- ವೈದ್ಯಕೀಯ ಕಾರಣಗಳನ್ನು ಹೊರತುಪಡಿಸಿ, ಉದ್ಯೋಗಿಗಳು ಪ್ರತಿ ತ್ರೈಮಾಸಿಕದಲ್ಲಿ (Quarter) ಗರಿಷ್ಠ ಐದು ದಿನಗಳವರೆಗೆ ಹೆಚ್ಚುವರಿ ಮನೆಯಿಂದ ಕೆಲಸ ಸೌಲಭ್ಯವನ್ನು ವಿನಂತಿಸಬಹುದು.
- ಹಿರಿಯ ಸಿಬ್ಬಂದಿ (JL6 ಮತ್ತು ಅದಕ್ಕಿಂತ ಮೇಲ್ಪಟ್ಟವರು) ಈಗ ವಾರಕ್ಕೆ 4 ದಿನ ಕಚೇರಿಯಿಂದಲೇ ಕೆಲಸ ಮಾಡಬೇಕು.
ಸೌಲಭ್ಯಗಳು ಮತ್ತು ಕಾರ್ಯಾಚರಣೆಯ ಅಗತ್ಯಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಂಪನಿಯು ಈ ಮಾದರಿಯನ್ನು ರೂಪಿಸಿದೆ ಎಂದು ವಿವರಿಸಲಾಗಿದೆ.

