ಬೆಂಗಳೂರು: ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ (17 ಬಾರಿ) ಬಜೆಟ್ ಮಂಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದು ಸಮಯದ ವಿಚಾರದಲ್ಲೂ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ತಮ್ಮ ಬದುಕಿನ 17ನೇ ಬಜೆಟ್ ಮಂಡಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಬೆಳಿಗ್ಗೆ 10:15ಕ್ಕೆ ಭಾಷಣ ಆರಂಭಿಸಿದ ಅವರು ಸುದೀರ್ಘ 3 ಗಂಟೆ 30 ನಿಮಿಷ ಬಜೆಟ್ ಮಂಡಿಸಿ ಹೊಸ ದಾಖಲೆ ಬರೆದರು. 3 ಗಂಟೆ 30 ನಿಮಿಷಗಳ ಕಾಲ ನಿಂತಲ್ಲೇ ನಿಂತು 4.48 ಲಕ್ಷ ಕೋಟಿ ರೂ. ಗಾತ್ರದ ಬೃಹತ್ ಬಜೆಟ್ ಮಂಡಿಸಿದ್ದಾರೆ.ಇದು ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲೇ ಮುಖ್ಯಮಂತ್ರಿಯೊಬ್ಬರು ಮಾಡಿದ ಅತ್ಯಂತ ದೀರ್ಘವಾದ ಬಜೆಟ್ ಭಾಷಣವಾಗಿದೆ.
ವಯಸ್ಸನ್ನು ಮೀರಿಸಿದ ಉತ್ಸಾಹ: 77ರ ಹರೆಯದಲ್ಲೂ ಸಿದ್ದರಾಮಯ್ಯ ಅವರು ಒಂದೇ ಸಮನೆ ಮೂರೂವರೆ ಗಂಟೆಗಳ ಕಾಲ ಆಯವ್ಯಯದ ಪ್ರತಿಯನ್ನು ಓದಿರುವುದು ಅವರ ದೈಹಿಕ ಮತ್ತು ಮಾನಸಿಕ ಕ್ಷಮತೆಗೆ ಸಾಕ್ಷಿಯಾಗಿದೆ.ಈ ಹಿಂದೆ ತಮ್ಮದೇ ಹೆಸರಿನಲ್ಲಿದ್ದ ಸುದೀರ್ಘ ಭಾಷಣದ ದಾಖಲೆಯನ್ನು ಈ ಬಾರಿ ಅವರೇ ಅಳಿಸಿ ಹಾಕಿದ್ದಾರೆ.
ಈ ಬಾರಿಯ ಬಜೆಟ್ನಲ್ಲಿ 56,000ಕ್ಕೂ ಹೆಚ್ಚು ಉದ್ಯೋಗ ನೇಮಕಾತಿ, 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ ಹಾಗೂ ಅನ್ನಭಾಗ್ಯದಡಿ ‘ಇಂದಿರಾ ಆಹಾರ ಕಿಟ್’ ಘೋಷಣೆಯಂತಹ ಹತ್ತಾರು ಜನಪರ ಯೋಜನೆಗಳನ್ನು ಅವರು ಈ ಸುದೀರ್ಘ ಭಾಷಣದುದ್ದಕ್ಕೂ ಮಂಡಿಸಿದರು.
ದೇಶದಲ್ಲೇ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದವರಲ್ಲಿ ಸಿದ್ದರಾಮಯ್ಯಗೆ 2ನೇ ಸ್ಥಾನ!
ರಾಷ್ಟ್ರೀಯ ದಾಖಲೆ: ಭಾರತದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದವರ ಪಟ್ಟಿಯಲ್ಲಿ ಈ ಮೊದಲು ಗುಜರಾತ್ನ ಮಾಜಿ ಹಣಕಾಸು ಸಚಿವ ವಜುಭಾಯಿ ವಾಲಾ (18 ಬಾರಿ) ಮೊದಲ ಸ್ಥಾನದಲ್ಲಿದ್ದಾರೆ. ಈಗ ಸಿದ್ದರಾಮಯ್ಯ ಅವರು 17 ಬಾರಿ ಬಜೆಟ್ ಮಂಡಿಸುವ ಮೂಲಕ ಅವರ ಸಮೀಪಕ್ಕೆ ಬಂದಿದ್ದು, ದೇಶದ ಎರಡನೇ ಅತಿ ಹೆಚ್ಚು ಬಜೆಟ್ ಮಂಡಿಸಿದ ನಾಯಕರಾಗಿದ್ದಾರೆ.
ಕರ್ನಾಟಕದ ದಾಖಲೆ: ರಾಜ್ಯದಲ್ಲಿ ಸಿದ್ದರಾಮಯ್ಯ ಅವರಿಗೆ ಸರಿಸಾಟಿಯಾದ ಮತ್ತೊಬ್ಬ ನಾಯಕರಿಲ್ಲ. ಅವರು ಇದುವರೆಗೆ ವಿವಿಧ ಸರ್ಕಾರಗಳಲ್ಲಿ (ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್, ಧರ್ಮಸಿಂಗ್ ಅವರ ಮಂತ್ರಿಮಂಡಲದಲ್ಲಿ ಹಾಗೂ ಮುಖ್ಯಮಂತ್ರಿಯಾಗಿ) ಒಟ್ಟು 17 ಬಾರಿ ಆಯವ್ಯಯ ಮಂಡಿಸಿದ್ದಾರೆ.
ಬಜೆಟ್ ಇತಿಹಾಸ: ಸಿದ್ದರಾಮಯ್ಯ ಅವರು ತಮ್ಮ ಮೊದಲ ಬಜೆಟ್ ಅನ್ನು 1995-96ರಲ್ಲಿ ಮಂಡಿಸಿದ್ದರು. ಅಂದಿನ ಬಜೆಟ್ ಗಾತ್ರ ಸುಮಾರು ₹12,616 ಕೋಟಿ ಇತ್ತು. ಆದರೆ ಇಂದು ಅವರು ಮಂಡಿಸಿದ 17ನೇ ಬಜೆಟ್ ಗಾತ್ರ ಬರೋಬ್ಬರಿ ₹4,48,004 ಕೋಟಿ ದಾಟಿದೆ.

