ಪಶುಸಂಗೋಪನೆಯಲ್ಲಿ ಕೇವಲ ಹಸು, ಎಮ್ಮೆ ಅಥವಾ ಕುರಿ-ಮೇಕೆಗಳ ಸಾಕಾಣಿಕೆಗೆ ಸೀಮಿತವಾಗಿದ್ದ ಕಾಲ ಈಗ ಮರೆಯಾಗುತ್ತಿದೆ. ದೇಶದಲ್ಲಿ ಕತ್ತೆಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರವು ಕತ್ತೆ, ಕುದುರೆ ಮತ್ತು ಒಂಟೆಗಳ ತಳಿ ಸಂರಕ್ಷಣೆಗೆ ವಿಶೇಷ ಒತ್ತು ನೀಡಿದೆ. ಒಂದು ಕೋಟಿ ರೂಪಾಯಿ ವೆಚ್ಚದ ಯೋಜನೆಯಲ್ಲಿ ಅರ್ಧದಷ್ಟು ಅಂದರೆ 50 ಲಕ್ಷ ರೂಪಾಯಿಗಳನ್ನು ಸರ್ಕಾರವೇ ಭರಿಸಲಿದ್ದು, ನಿರುದ್ಯೋಗಿ ಯುವಕರಿಗೆ ಮತ್ತು ರೈತರಿಗೆ ಇದು ಸುಸಂದರ್ಭವಾಗಿದೆ.
ಹೌದು. ಕತ್ತೆ ಸಾಕಾಣಿಕೆ ಮಾಡುವವರಿಗೆ ಕೇಂದ್ರ ಸರ್ಕಾರ ಈಗ ಸಿಹಿ ಸುದ್ದಿ ನೀಡಿದೆ. ಕತ್ತೆಗಳನ್ನು ಸಾಕಿದರೆ ಕೇಂದ್ರ ಸರ್ಕಾರ ಅಕ್ಷರಶಃ 50 ಲಕ್ಷ ರೂಪಾಯಿಗಳವರೆಗೆ ಆರ್ಥಿಕ ನೆರವು ನೀಡುತ್ತಿದೆ. ಕೇಳಲು ಇದು ಸ್ವಲ್ಪ ವಿಚಿತ್ರ ಎನಿಸಿದರೂ, ಆಶ್ಚರ್ಯವೆನಿಸಿದರೂ ಇದು ನೂರಕ್ಕೆ ನೂರು ನಿಜ. ದೇಶದಲ್ಲಿ ವೇಗವಾಗಿ ಕ್ಷೀಣಿಸುತ್ತಿರುವ ಕತ್ತೆಗಳ ಸಂಖ್ಯೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಈಗ ಇವುಗಳ ಮೇಲೆ ಗಮನ ಹರಿಸಿದೆ. ಇದನ್ನು ‘‘ನ್ಯಾಷನಲ್ ಲೈವ್‌ಸ್ಟಾಕ್ ಮಿಷನ್’‘ (NLM) ಯೋಜನೆಯಡಿ ಸೇರಿಸಲಾಗಿದೆ.
ಯೋಜನೆಯವಿವರಗಳು
ಸರ್ಕಾರಿ ವರದಿಗಳ ಪ್ರಕಾರ, ದೇಶದಲ್ಲಿ ಕತ್ತೆಗಳ ಸಂಖ್ಯೆ ಶೇಕಡಾ 60 ರಷ್ಟು ಕಡಿಮೆಯಾಗಿದೆ. ಈ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ಕತ್ತೆ ಸಾಕಾಣಿಕೆಯನ್ನು ಉತ್ತೇಜಿಸುತ್ತಿದೆ. ಇದರ ಭಾಗವಾಗಿ:
- ಎಫ್‌ಪಿಒ (ರೈತ ಉತ್ಪಾದಕ ಸಂಸ್ಥೆಗಳು), ಸ್ವಸಹಾಯ ಗುಂಪುಗಳು ಅಥವಾ ಸೆಕ್ಷನ್ 8 ರ ಅಡಿಯಲ್ಲಿ ಬರುವ ಕಂಪನಿಗಳು ಕತ್ತೆಗಳು, ಕುದುರೆಗಳು ಅಥವಾ ಒಂಟೆಗಳ ಸಾಕಾಣಿಕೆಗಾಗಿ ಅರ್ಜಿ ಸಲ್ಲಿಸಬಹುದು.
- ಒಟ್ಟು ಯೋಜನಾ ವೆಚ್ಚದಲ್ಲಿ 50 ಪ್ರತಿಶತ ಸಬ್ಸಿಡಿಯನ್ನು ಸರ್ಕಾರ ನೀಡುತ್ತದೆ.
- ಈ ಸಬ್ಸಿಡಿ ಮೊತ್ತವು ಗರಿಷ್ಠ 50 ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ಅಂದರೆ ಯೋಜನೆಯ ವೆಚ್ಚ ಒಂದು ಕೋಟಿ ರೂಪಾಯಿ ಆಗಿದ್ದರೆ, ಕೇಂದ್ರ ಸರ್ಕಾರ ಅದರಲ್ಲಿ 50 ಲಕ್ಷ ರೂಪಾಯಿಗಳ ಸಹಾಯಧನ ನೀಡುತ್ತದೆ.
ಕತ್ತೆಗಳ ಸಂಖ್ಯೆ ಮತ್ತು ಸಂರಕ್ಷಣೆ:
2019 ರ ಪಶುಗಣತಿಯ ಪ್ರಕಾರ, ಭಾರತದಲ್ಲಿ ಕತ್ತೆಗಳ ಸಂಖ್ಯೆ ಕೇವಲ 1.23 ಲಕ್ಷ ಮಾತ್ರ ಇದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ರಾಜಸ್ಥಾನ, ಯುಪಿ, ಮಧ್ಯಪ್ರದೇಶ, ಬಿಹಾರ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಇವುಗಳ ಸಂಖ್ಯೆ ಹೆಚ್ಚಿದೆ. ಆದಾಗ್ಯೂ, ಕೆಲವು ರಾಜ್ಯಗಳಲ್ಲಿ ಕತ್ತೆಗಳ ಸಂಖ್ಯೆ ಕೇವಲ 2 ರಿಂದ 10 ರಷ್ಟಿರುವುದು ಆತಂಕದ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಕತ್ತೆ ತಳಿಗಳ ಸಂರಕ್ಷಣೆಯೊಂದಿಗೆ ಅವುಗಳ ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಸರ್ಕಾರ ಶ್ರಮಿಸುತ್ತಿದೆ.
ಕತ್ತೆ ಹಾಲನ್ನು ‘ಆಹಾರ ಪದಾರ್ಥ’ (Food Item) ಎಂದು ಗುರುತಿಸುವಂತೆ FSSAI ಗೆ ಕೋರಲಾಗಿದೆ. ಕೇಂದ್ರ ಸರ್ಕಾರವು ಕೇವಲ ವ್ಯಕ್ತಿಗಳಿಗೆ ಮಾತ್ರವಲ್ಲದೆ, ತಳಿ ಸಂರಕ್ಷಣೆಗಾಗಿ ಕೆಲಸ ಮಾಡುವ ರಾಜ್ಯ ಸರ್ಕಾರಗಳಿಗೂ ಭಾರಿ ಪ್ರಮಾಣದ ನಿಧಿಯನ್ನು ಮೀಸಲಿಟ್ಟಿದೆ. ಒಂದು ವೇಳೆ ರಾಜ್ಯ ಸರ್ಕಾರವು ಕತ್ತೆ, ಕುದುರೆ ಅಥವಾ ಒಂಟೆಗಳ ಸಂರಕ್ಷಣೆಗಾಗಿ ಕೆಲಸ ಮಾಡಿದರೆ ಕೇಂದ್ರವು 10 ಕೋಟಿ ರೂಪಾಯಿಗಳವರೆಗೆ ನೆರವು ನೀಡುತ್ತದೆ.
ನ್ಯಾಷನಲ್ ಲೈವ್‌ಸ್ಟಾಕ್ ಮಿಷನ್ 2015 ರಲ್ಲಿ ಪ್ರಾರಂಭವಾಯಿತು. ಇದರ ಅಡಿಯಲ್ಲಿ ಬ್ರೀಡಿಂಗ್ ಸೆಂಟರ್ಸ್ (ಸಂತಾನೋತ್ಪತ್ತಿ ಕೇಂದ್ರಗಳು), ಪಶು ತಳಿ ಅಭಿವೃದ್ಧಿ ಮತ್ತು ಸಾಕಾಣಿಕೆಯ ಮೇಲೆ ವಿಶೇಷ ಗಮನ ಹರಿಸಲಾಗುತ್ತಿದೆ. ಹೂಡಿಕೆಯ ಅರ್ಧದಷ್ಟು ಹೊರೆಯನ್ನು ಸರ್ಕಾರವೇ ಭರಿಸುವ ಮೂಲಕ ನಿರುದ್ಯೋಗಿಗಳಿಗೆ ಮತ್ತು ರೈತರಿಗೆ ಹೊಸ ಉದ್ಯೋಗಾವಕಾಶಗಳನ್ನು ಈ ಮಿಷನ್ ಕಲ್ಪಿಸುತ್ತಿದೆ.

