HomeLatest NewsT20 World Cup 2026: ಬೆಥೆಲ್‌ಗೆ ಸಿಗದ ಸರಿಯಾದ ಜೋಡಿ; ಥ್ರಿಲ್ಲರ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಮಣಿಸಿ...

T20 World Cup 2026: ಬೆಥೆಲ್‌ಗೆ ಸಿಗದ ಸರಿಯಾದ ಜೋಡಿ; ಥ್ರಿಲ್ಲರ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಮಣಿಸಿ ಫೈನಲ್ ತಲುಪಿದ ಭಾರತ

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ( ಮಾರ್ಚ್ 5 ) ನಡೆಯುತ್ತಿರುವ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 7 ರನ್‌ಗಳ ಗೆಲುವನ್ನು ದಾಖಲಿಸಿ ಫೈನಲ್ ತಲುಪಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆರಿಸಿಕೊಂಡು ಭಾರತ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಬ್ಯಾಟಿಂಗ್‌ಗೆ ಇಳಿದ ಭಾರತ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್, ಇಶಾನ್ ಕಿಶನ್, ಶಿವಮ್ ದುಬೆ ಬೆಂಕಿ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಬಾರಿಸಿ ಇಂಗ್ಲೆಂಡ್‌ಗೆ 254 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಲು ಮುಂದಾಗಿ ಕೊನೆಯ ಓವರ್‌ವರೆಗೆ ಪಂದ್ಯವನ್ನು ಕೊಂಡೊಯ್ದ ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 246 ರನ್ ಕಲೆಹಾಕಿತು.

ಭಾರತದ ಇನ್ನಿಂಗ್ಸ್: ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಕೇವಲ 9 ರನ್‌ಗೆ ವಿಕೆಟ್ ಒಪ್ಪಿಸಿದರು. ಹೀಗೆ ಭಾರತ 20 ರನ್‌ಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಒಂದಾದ ಇಶಾನ್ ಕಿಶನ್ ಹಾಗೂ ಮತ್ತೋರ್ವ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಅಬ್ಬರದ ಆಟವನ್ನಾಡಿ 45 ಎಸೆತಗಳಲ್ಲಿ 97 ರನ್ ಜತೆಯಾಟವನ್ನಾಡಿ ಅಬ್ಬರಿಸಿದರು. ಇಶಾನ್ ಕಿಶನ್ 18 ಎಸೆತಗಳಲ್ಲಿ 39 ರನ್ ಬಾರಿಸಿದರು. ಕಿಶನ್ ವಿಕೆಟ್ ಒಪ್ಪಿಸಿದ ಬೆನ್ನಲ್ಲೇ ಕಣಕ್ಕಿಳಿದ ಶಿವಮ್ ದುಬೆ 25 ಎಸೆತಗಳಲ್ಲಿ 43 ರನ್ ಚಚ್ಚಿದರು. ಆರಂಭದಿಂದಲೂ ಅಬ್ಬರಿಸಿ ಬೊಬ್ಬರಿದ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 89 ರನ್ ಬಾರಿಸಿದರು. ಇನ್ನುಳಿದಂತೆ ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 27, ಕೊನೆಯಲ್ಲಿ ಅಬ್ಬರಿಸಿದ ತಿಲಕ್ ವರ್ಮಾ 7 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 21 ರನ್ ಬಾರಿಸಿ ಅಬ್ಬರಿಸಿದರು. ಅಕ್ಸರ್ ಪಟೇಲ್ ಅಜೆಯ 2 ರನ್ ಗಳಿಸಿದರೆ, ಯಾವುದೇ ರನ್ ಕಲೆಹಾಕದ ವರುಣ್ ಚಕ್ರವರ್ತಿ ಅಜೇಯರಾಗಿ ಉಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂಗ್ಲೆಂಡ್ ಪರ ಆದಿಲ್ ರಶೀದ್ ಹಾಗೂ ವಿಲ್ ಜ್ಯಾಕ್ಸ್ ತಲಾ ಎರಡು ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್ ಒಂದು ವಿಕೆಟ್ ಪಡೆದರು.

ಇಂಗ್ಲೆಂಡ್ ಇನ್ನಿಂಗ್ಸ್: ಭಾರತ ನೀಡಿದ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಕೇವಲ 38 ರನ್‌ಗೆ ತನ್ನ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕನಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ ಕೇವಲ 5 ರನ್‌ಗೆ ವಿಕೆಟ್ ಒಪ್ಪಿಸಿದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹ್ಯಾರಿ ಬ್ರೂಕ್ ಕೇವಲ 7 ರನ್‌ಗೆ ವಿಕೆಟ್ ಒಪ್ಪಿಸಿದರು. ಈ ಸಮಯದಲ್ಲಿ ಕಣಕ್ಕಿಳಿದ ಜೇಕಬ್ ಬೆಥೆಲ್ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ನಡೆಸಿದರು. ಶತಕ ಬಾರಿಸಿ ಕೊನೆಯ ಓವರ್‌ವರೆಗೂ ಕಣದಲ್ಲಿದ್ದು ತನ್ನ ತಂಡಕ್ಕೆ ಗೆಲುವನ್ನು ತಂದುಕೊಡಬೇಕೆಂಬ ಹಂಬಲವನ್ನು ದೊಡ್ಡ ಹೊಡೆತಗಳನ್ನು ಬಾರಿಸುತ್ತಾ ಪ್ರಯತ್ನಿಸಿದ ಜೇಕಬ್ ಬೆಥೆಲ್‌ಗೆ ಸರಿಯಾದ ಜತೆಯಾಟ ಆರಂಬದಲ್ಲಿ ಸಿಗದೇ ಇದ್ದದ್ದು ಇಂಗ್ಲೆಂಡ್ ಸೋಲಿಗೆ ಕಾರಣ ಎಂದೇ ಹೇಳಬಹುದು. ಅನುಭವಿ ಜೋಸ್ ಬಟ್ಲರ್ ಅಥವಾ ಟಾಮ್ ಬ್ಯಾಂಟನ್ ಅಗತ್ಯವಿದ್ದ ಜತೆಯಾವನ್ನೇನಾದರೂ ನೀಡಿದ್ದರೆ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದು ಬೀಗಿರುತ್ತಿತ್ತು. ಆದರೆ ಜೋಸ್ ಬಟ್ಲರ್ 25 ರನ್ ಮತ್ತು ಕೇವಲ 5 ಎಸೆತಗಳಲ್ಲಿ 17 ರನ್ ಚಚ್ಚಿದ ಬ್ಯಾಂಟನ್ ವಿಕೆಟ್ ಒಪ್ಪಿಸಿದರು. ಈ ಮೂಲಕ ಇಂಗ್ಲೆಂಡ್ 95 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಈ ಸಮಯದಲ್ಲಿ ಒಂದಾದ ಜೇಕಬ್ ಬೆಥೆಲ್ ಹಾಗೂ ವಿಲ್ ಜ್ಯಾಕ್ಸ್ 39 ಎಸೆತಗಳಲ್ಲಿ 77 ರನ್‌ಗಳ ಜತೆಯಾಟವನ್ನಾಡಿ ತಂಡಕ್ಕೆ ಸುಧಾರಣೆ ತಂದರು. ಜಾಕ್ಸ್ 35 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅಲ್ಲಿಗೆ 172 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್‌ಗೆ ಬೆಥೆಲ್ ಗೆಲುವಿನ ಆಶಾಕಿರಣವಾಗಿದ್ದರೂ ಮತ್ತೆ ಜತೆಯಾಟದ ಕೊರತೆ ಉಂಟಾಯಿತು. ಸ್ಯಾಮ್ ಕರನ್ 14 ಎಸೆತಗಳನ್ನು ಎದುರಿಸಿ 18 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಬೆನ್ನಲ್ಲೇ ಜೇಕಬ್ ಬೆಥೆಲ್ ಔಟ್ ಆದರು. ಒಂದು ಕಡೆಗೆ ವಾಲಿದ್ದ ಪಂದ್ಯವನ್ನು ಏಕಾಂಕಿಯಾಗಿ ನಿಂತು ಕೊನೆಯ ಓವರ್‌ವರೆಗೂ ತಂದ ಬೆಥೆಲ್ 48 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 105 ರನ್ ಚಚ್ಚಿ ರನ್‌ಔಟ್ ಆದರು. ಇನ್ನುಳಿದಂತೆ ಜೇಮಿ ಓವರ್ಟನ್ ಅಜೇಯ 3 ರನ್ ಮತ್ತು ಅಂತಿಮ ಓವರ್‌ನಲ್ಲಿ ಮೂರು ಸಿಕ್ಸರ್ ಸಿಡಿಸಿದ ಜೋಫ್ರಾ ಆರ್ಚರ್ 4 ಎಸೆತಗಳಲ್ಲಿ ಅಜೇಯ 19 ರನ್ ಬಾರಿಸಿದರು.

ಭಾರತದ ಪರ ಹಾರ್ದಿಕ್ ಪಾಂಡ್ಯ ಎರಡು ವಿಕೆಟ್, ಅರ್ಷ್‌ದೀಪ್ ಸಿಂಗ್, ಜಸ್‌ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಹಾಗೂ ಅಕ್ಸರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.

ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಹ್ಯಾರಿ ಬ್ರೂಕ್‌ನ ಕಠಿಣ ಕ್ಯಾಚ್ ಪಡೆದ ಅಕ್ಸರ್ ಪಟೇಲ್ ಪಂದ್ಯದ ಗತಿ ಬದಲಿಸಿದವ ಎನಿಸಿಕೊಂಡರು. ಇಷ್ಟು ಮಾತ್ರವಲ್ಲದೇ ಬೌಂಡರಿ ಲೈನ್‌ನಲ್ಲಿ ವಿಲ್ ಜ್ಯಾಕ್ಸ್‌ ಕಠಿಣ ಕ್ಯಾಚ್‌ನ್ನು ಪಡೆದು ದುಬೆ ಕೈಗಿಟ್ಟ ಅಕ್ಸರ್ ಪಟೇಲ್ ಮತ್ತೊಮ್ಮೆ ಪಂದ್ಯದ ದಿಕ್ಕನ್ನು ಬದಲಿಸಿದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular