ಬೆಂಗಳೂರು: 7 ವರ್ಷದ ಹಿಂದೆ ಐಎಎಸ್ಸಿ ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ್ ಲಾಲ್ ಸಚ್ ದೇವ್(71), ಪತ್ನಿ ರೀಟಾ(65) ಮತ್ತು ಪುತ್ರ ಮುನ್ನಾ(35) ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮೂಲದ ನಾಲ್ವರು ವಲಸೆ ಕಾರ್ಮಿಕರಿಗೆ ಹೈಕೋರ್ಟ್ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಪಶ್ಚಿಮ ಬಂಗಾಳದ ದೀಪಕ್ ಹಲ್ದಾರ್, ಆತನ ಪತ್ನಿ ಸುಚಿತ್ರಾ, ಮುಜಾಫರ್ ನಗರ ಮೂಲದ ಮೊಹಮ್ಮದ್ ಸರ್ಬಲ್ ಮತ್ತು ಬಿದನ್ ಜೀವಾವಧಿ ಶಿಕ್ಷೆಗೆ ಒಳಗಾದವರು.
ಆರೋಪಿಗಳನ್ನು ಖುಲಾಸೆಗೊಳಿಸಿದ ಬೆಂಗಳೂರಿನ 65ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿ ಪರಿಗಣಿಸಿದ ಹೈಕೋರ್ಟ್ ವಿಭಾಗೀಯ ಪೀಠ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಮತ್ತು ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯ್ಕ್ ಅವರಿದ್ದ ಪೀಠದಿಂದ ಈ ತೀರ್ಪು ನೀಡಲಾಗಿದೆ.
ಆರೋಪಿಗಳು ಹಣ, ಚಿನ್ನಾಭರಣಕ್ಕಾಗಿ ನಿವೃತ್ತ ಪ್ರಾಧ್ಯಾಪಕ ಸೇರಿ ಮೂವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದರು. ದೀಪಕ್ ಮತ್ತು ಸುಚಿತ್ರಾ ಮನೆ ಕೆಲಸದವರಾಗಿದ್ದರು. ಹಣ ಚಿನ್ನಾಭರಣದ ಆಸೆಗಾಗಿ ಅಮಾಯಕರನ್ನು ಕೊಲೆ ಮಾಡಿರುವುದು ಅತ್ಯಂತ ಗಂಭೀರ ಅಪರಾಧವಾಗಿದೆ. ಸಮಾಜದ ಶಾಂತಿ, ಸಹ ಬಾಳ್ವೆಗೆ ಇಂತಹ ಕೃತ್ಯ ಧಕ್ಕೆ ತರುತ್ತವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಮನೆಯೊಳಗೆ ಕೆಲಸಕ್ಕೆ ನೇಮಿಸಿಕೊಳ್ಳುವ ಕಾರ್ಮಿಕರ ಬಗ್ಗೆ ಪೊಲೀಸ್ ವೆರಿಫಿಕೇಶನ್ ನಡೆಸುವುದು ಅಗತ್ಯವಾಗಿದೆ. ಅವರ ಹಿನ್ನೆಲೆಯ ಸಮಗ್ರ ಮಾಹಿತಿ ಪರಿಶೀಲಿಸುವ ವ್ಯವಸ್ಥೆ ಅಗತ್ಯವಿದ್ದು, ಇದಕ್ಕಾಗಿ ಸುಲಭವಾದ ಆನ್ ಲೈನ್ ಪರಿಶೀಲನಾ ವ್ಯವಸ್ಥೆ ತರಬೇಕಿದೆ. ಪರಿಶೀಲನೆ ಪ್ರಕ್ರಿಯೆಯ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಯಾವುದೇ ರೀತಿಯ ಕಿರುಕುಳ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದ್ದು, ತೀರ್ಪಿನ ಪ್ರತಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಳುಹಿಸಲು ಆದೇಶಿಸಿದೆ.
2009ರ ಫೆಬ್ರವರಿ 16ರಂದು ಬೆಂಗಳೂರಿನ ಆರ್.ಟಿ. ನಗರದಲ್ಲಿ ಐಎಎಸ್ಸಿ ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ್, ಅವರ ಪತ್ನಿ ರೀಟಾ, ಪುತ್ರ ಮುನ್ನಾ 35 ಅವರನ್ನು ಕೊಲೆ ಮಾಡಲಾಗಿತ್ತು

