ಮಂಗಳೂರು: ಗ್ರಾಹಕನ ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ಹಣ ವಿತ್ ಡ್ರಾ ಮಾಡಿದ ಕುರಿತಾಗಿ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಹಣ ಕಳೆದುಕೊಂಡ ವ್ಯಕ್ತಿ ದೂರು ನೀಡಿದ್ದು, ಫೆಬ್ರವರಿ 28ರಂದು ತನ್ನ ಮೊಬೈಲ್ ನಲ್ಲಿದ್ದ ಸಿಮ್ ಕಾರ್ಡ್ ಡೆಡ್ ಆಗಿರುವುದನ್ನು ಗಮನಿಸಿ ಏರ್ಟೆಲ್ ಕಚೇರಿಗೆ ಹೋಗಿ ಅದೇ ಸಂಖ್ಯೆಯ ಸಿಮ್ ಪಡೆದು ಕಚೇರಿಯಲ್ಲಿ ತಿಳಿಸಿದಂತೆ 4 ಗಂಟೆಯ ನಂತರ ಆ ಸಿಮ್ ಅನ್ನು ಮೊಬೈಲ್ ಗೆ ಹಾಕಿ ಗೂಗಲ್ ಪೇ ಆ್ಯಪ್ ಆಕ್ಟಿವೇಶನ್ ಮಾಡುವಾಗ ಒಟಿಪಿ ಬಂದಿದೆ. ಆದರೆ ಆ ಒಟಿಪಿಯನ್ನು ಅವರು ಹಾಕಿಲ್ಲ.
ಅವರು ಪಂಪ್ವೆಲ್ ನಲ್ಲಿರುವ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದು, ಮಾರ್ಚ್ 2ರಂದು ಮುಂಜಾನೆ ಹಂತ ಹಂತವಾಗಿ ಅವರ ಖಾತೆಯಿಂದ ಹಣ ಕಡಿತವಾಗಿರುವ ಬಗ್ಗೆ ಮೊಬೈಲ್ ಗೆ ಮೆಸೇಜ್ ಬಂದಿದೆ. ನಂತರ ಅವರು ಬ್ಯಾಂಕಿಗೆ ಹೋಗಿ ತಮ್ಮ ಖಾತೆಯನ್ನು ಸ್ಥಗಿತಗೊಳಿಸುವಂತೆ ತಿಳಿಸಿದ್ದಾರೆ.
ಫೆಬ್ರವರಿ 27ರಿಂದ ಮಾರ್ಚ್ 2ರವರೆಗೆ ಬ್ಯಾಂಕ್ ಸ್ಟೇಟ್ಮೆಂಟ್ ಪಡೆದುಕೊಂಡು ಪರಿಶೀಲಿಸಿದಾಗ ಅವರ ಖಾತೆಯಿಂದ ಹಂತ ಹಂತವಾಗಿ 1.98 ಲಕ್ಷ ರೂ. ಅನಧಿಕೃತವಾಗಿ ವಿತ್ ಡ್ರಾ ಮಾಡಿರುವುದು ಗೊತ್ತಾಗಿದೆ. ಹಣ ಕಳೆದುಕೊಂಡ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.

