ಬೆಂಗಳೂರು : ರಾಜ್ಯದ ಭ್ರಷ್ಟ ಅಧಿಕಾರಿಗಳ ಪಾಲಿಗೆ ಇಂದು ‘ಕರಾಳ ಗುರುವಾರ’ವಾಗಿ ಪರಿಣಮಿಸಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಕರ್ನಾಟಕ ಲೋಕಾಯುಕ್ತ ಪೊಲೀಸರು ಇಂದು ಬೆಳ್ಳಂಬೆಳಗ್ಗೆಯೇ ರಾಜ್ಯಾದ್ಯಂತ ಏಕಕಾಲಕ್ಕೆ ಬೃಹತ್ ದಾಳಿ ನಡೆಸಿದ್ದಾರೆ.
ಎಲ್ಲೆಲ್ಲಿ ದಾಳಿ.?
ಬೆಂಗಳೂರು, ಮೈಸೂರು, ಬಾಗಲಕೋಟೆ, ಮಂಡ್ಯ, ಧಾರವಾಡ, ಹಾಸನ, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ದಾಳಿ ಮಾಡಿರುವ ಅಧಿಕಾರಿಗಳು ಅಕ್ರಮ ಆಸ್ತಿ ಪತ್ರಗಳನ್ನು ವಶಪಡಿಸಿಕೊಂಡಿದ್ದು, ಭ್ರಷ್ಟ ಕುಳಗಳ ನಿದ್ದೆ ಗೆಡಿಸಿದ್ದಾರೆ.
ಯಾದಗಿರಿಯಲ್ಲಿ ಎಲೆಕ್ಟ್ರಿಕಲ್ ಇಲಾಖೆ ಡೆಪ್ಯುಟಿ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ವಿರೇಶ್ ಹಿರೇಮಠ್ ಅವರ ನಿವಾಸದ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಧಾರವಾಡದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಎಂ.ಕೆ. ಸುರಕೋಡ ಅವರ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಡ್ಯದಲ್ಲಿ ಸಾರ್ವಜನಿಕ ಕಾಮಗಾರಿಗಳ ಇಲಾಖೆ (PWD) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್. ಸತೀಶ್ ಅವರ ಮನೆ ಮತ್ತು ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.
ಹಾಸನ ಮಹಾನಗರ ಪಾಲಿಕೆಯ ಎಇಇ ಎಂ.ಸಿ. ಸತ್ಯನಾರಾಯಣ , ವಿಜಯಪುರದಲ್ಲಿ ಕೃಷ್ಣಭಾಗ್ಯ ಜಲ ನಿಗಮದ ಜೂನಿಯರ್ ಇಂಜಿನಿಯರ್ ಪ್ರಕಾಶ್ ಪಿ.ಜಿ. ಅವರ ಮನೆ ಹಾಗೂ ಮೈಸೂರಿನಲ್ಲಿ ಜಲಮಂಡಳಿಯ ಎಇಇ ಹಾಗೂ ಇಇ (ಇನ್ಚಾರ್ಜ್) ಆಶಿಫ್ ಇಕ್ಬಾಲ್ ಅವರ ನಿವಾಸದಲ್ಲಿ ಪರಿಶೀಲನೆ ನಡೆಯುತ್ತಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಚೀಫ್ ಇಂಜಿನಿಯರ್ ವಸಂತ್ ವಾಲಪ್ಪ ನಾಯಕ್ ಅವರ ನಿವಾಸದ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇತ್ತೀಚಿನ ಇತರ ಕಾರ್ಯಾಚರಣೆಗಳು: ಕೇವಲ ಆಸ್ತಿ ಗಳಿಕೆ ಮಾತ್ರವಲ್ಲದೆ, ಇತ್ತೀಚೆಗೆ ಶಾಸಕರೊಬ್ಬರು ಲಂಚ ಪಡೆಯುವಾಗ ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವುದು ಮತ್ತು ಭದ್ರಾವತಿಯ ಬಿಇಓ (BEO) ಲಂಚದ ಹಣದೊಂದಿಗೆ ಲೋಕಾಯುಕ್ತ ಬಲೆಗೆ ಬಿದ್ದಿರುವುದು ಸುದ್ದಿಯಲ್ಲಿದೆ.ಲೋಕಾಯುಕ್ತದ ಈ ಸತತ ದಾಳಿಗಳಿಂದ ಭ್ರಷ್ಟ ಅಧಿಕಾರಿಗಳಲ್ಲಿ ನಡುಕ ಶುರುವಾಗಿದೆ. ಸಾರ್ವಜನಿಕರು ಈ ಕ್ರಮವನ್ನು ಸ್ವಾಗತಿಸಿದ್ದು, ಪಾರದರ್ಶಕ ಆಡಳಿತಕ್ಕಾಗಿ ಲೋಕಾಯುಕ್ತ ಇನ್ನಷ್ಟು ಸಕ್ರಿಯವಾಗಬೇಕೆಂದು ಆಶಿಸಿದ್ದಾರೆ.

