ಕೋಲ್ಕತ್ತಾ: ಐಸಿಸಿ ಟಿ20 ವಿಶ್ವಕಪ್ 2026ರ ಮೊದಲ ಸೆಮಿಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಇಂದು ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಫೈನಲ್ ಪ್ರವೇಶಕ್ಕಾಗಿ ಪರಸ್ಪರ ಸೆಣಸಾಡಲಿವೆ.
ಸೂಪರ್ 8 ಹಂತದ ಮೊದಲ ಗುಂಪಿನಲ್ಲಿ ಅಜೇಯವಾಗಿ ಅಗ್ರಸ್ಥಾನ ಪಡೆದಿರುವ ದಕ್ಷಿಣ ಆಫ್ರಿಕಾ ಭರ್ಜರಿ ಫಾರ್ಮ್‌ನಲ್ಲಿದೆ. ಮತ್ತೊಂದೆಡೆ ಎರಡನೇ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ನ್ಯೂಜಿಲೆಂಡ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಪಂದ್ಯವು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಮುಖಾಮುಖಿ ದಾಖಲೆಗಳು: ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಇತಿಹಾಸವನ್ನು ಗಮನಿಸಿದರೆ ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸಿದೆ. ಈವರೆಗೆ ಈ ಎರಡು ತಂಡಗಳು ಒಟ್ಟು 19 ಪಂದ್ಯಗಳಲ್ಲಿ ಎದುರಾಗಿದ್ದು, ಅದರಲ್ಲಿ ಹರಿಣಗಳ ಪಡೆ 12 ಬಾರಿ ಜಯಗಳಿಸಿದೆ. ಕಿವೀಸ್ ತಂಡವು 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಸೆಮಿಫೈನಲ್‌ನಂತಹ ಒತ್ತಡದ ಪಂದ್ಯದಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನೀಡುವ ನಿರೀಕ್ಷೆಯಿದೆ.
ನೇರ ಪ್ರಸಾರ ಎಲ್ಲಿ ವೀಕ್ಷಿಸಬಹುದು? ಭಾರತದಲ್ಲಿ ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರವಾಗಿ ವೀಕ್ಷಿಸಬಹುದಾಗಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸಲು ಬಯಸುವವರು ಜಿಯೋ ಹಾಟ್‌ಸ್ಟಾರ್ ಮೂಲಕ ಲೈವ್ ಸ್ಟ್ರೀಮಿಂಗ್ ನೋಡಬಹುದು.
ತಂಡಗಳ ವಿವರ:
ದಕ್ಷಿಣ ಆಫ್ರಿಕಾ ತಂಡ: ಏಡನ್ ಮಾರ್ಕ್ರಾಮ್ (ನಾಯಕ), ಕ್ವಿಂಟನ್ ಡಿ ಕಾಕ್, ರಿಯಾನ್ ರಿಕೆಲ್ಟನ್, ಡೆವಾಲ್ಡ್ ಬ್ರೆವಿಸ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಜಾರ್ಜ್ ಲಿಂಡೆ, ಕಾರ್ಬಿನ್ ಬಾಷ್, ಅನ್ರಿಚ್ ನೋಕಿಯಾ, ಕ್ವೆನಾ ಮಫಾಕಾ, ಲುಂಗಿ ಎನ್ಗಿಡಿ, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್ ಮತ್ತು ಜೇಸನ್ ಸ್ಮಿತ್.
ನ್ಯೂಜಿಲೆಂಡ್ ತಂಡ: ಟಿಮ್ ಸೀಫರ್ಟ್, ಫಿನ್ ಅಲೆನ್, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಕೋಲ್ ಮೆಕ್ಕೊಂಚಿ, ಮ್ಯಾಟ್ ಹೆನ್ರಿ, ಇಶ್ ಸೋಧಿ, ಲೋಕಿ ಫರ್ಗುಸನ್, ಜೇಮ್ಸ್ ನೀಶಮ್, ಜಾಕೋಬ್ ಡಫಿ, ಕೈಲ್ ಜಾಮಿಸನ್ ಮತ್ತು ಡೆವೊನ್ ಕಾನ್ವೇ.

