ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡೆಗೆ ರಾಜ್ಯದ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2028ರ ವಿಧಾನಸಭೆ ಚುನಾವಣೆಗೆ ಯಡಿಯೂರಪ್ಪ ಅಭ್ಯರ್ಥಿಗಳ ಘೋಷಣೆ ಮಾಡಿದ್ದು, ವಿರೋಧಕ್ಕೆ ಕಾರಣವಾಗಿದೆ.
ಹೊನ್ನಾಳಿಯಲ್ಲಿ ಎಂ.ಪಿ.ರೇಣುಕಾಚಾರ್ಯ ಅಭಿಮಾನಿ ಬಳಗ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಹುಟ್ಟುಹಬ್ಬದ ಅಂಗವಾಗಿ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ದಾವಣಗೆರೆ ಜಿಲ್ಲೆಯ ವಿವಿಧ ಕ್ಷೇತ್ರಗಳಿಗೆ 2028ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಪಕ್ಷದ ಮುಖಂಡರು ಯಡಿಯೂರಪ್ಪ ವಿರುದ್ಧ ತಿರುಗಿಬಿದ್ದಿದ್ದು, ಹೊನ್ನಾಳಿಯಲ್ಲಿ ಮಾಡಿದ ಘೋಷಣೆಯನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ವಿರೋಧಿಸಿದ್ದು ಯಾರು?; ದಾವಣಗೆರೆ ಬಿಜೆಪಿ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಾಟೀಲ ಪತ್ರಿಕಾಗೋಷ್ಠಿ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇತ್ತೀಚೆಗೆ ಹೊನ್ನಾಳಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಯಡಿಯೂರಪ್ಪ ಜಿಲ್ಲೆಯ ಹಲವು ಕ್ಷೇತ್ರಗಳ ಬಿಜೆಪಿಯ ಸಂಭವನೀಯ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದಾರೆ” ಎಂದರು.
“ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಎಂ.ಪಿ. ರೇಣುಕಾಚಾರ್ಯ ಅವರನ್ನು ಸಚಿವರನ್ನಾಗಿ ಮಾಡುವಂತೆ ಕೋರಿದ್ದಾರೆ. ಪಕ್ಷದ ಶಿಷ್ಟಾಚಾರವನ್ನು ಉಲ್ಲಂಘಿಸುವಂತಹ ಹೇಳಿಕೆಯನ್ನು ಯಡಿಯೂರಪ್ಪ ಅವರಿಂದ ನಿರೀಕ್ಷಿಸಿರಲಿಲ್ಲ” ಎಂದು ಹೇಳಿದರು.
“ಯಡಿಯೂರಪ್ಪ ಪಕ್ಷದ ಪ್ರಶ್ನಾತೀತ ನಾಯಕರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದಿರುವ ಅವರ ಬಗ್ಗೆ ಅಪಾರ ಗೌರವವಿದೆ. ಭಾಷಣದಲ್ಲಿ ಅವರು ಆಡಿರುವ ಮಾತುಗಳ ಬಗ್ಗೆ ಮಾತ್ರ ಆಕ್ಷೇಪವಿದೆ. ಇದು ಅವರಿಗೆ ಶೋಭೆ ತರುವುದಿಲ್ಲ. ಪಕ್ಷದ ಕಾರ್ಯಕರ್ತರ ಉತ್ಸಾಹ ಕುಗ್ಗಿಸುವ ಪ್ರಯತ್ನವನ್ನು ಯಡಿಯೂರಪ್ಪ ಮಾಡಬಾರದು” ಎಂದು ತಿಳಿಸಿದರು.
“ಬಿಜೆಪಿಯು ಇತರ ಪಕ್ಷಕ್ಕಿಂತ ಭಿನ್ನವಾಗಿದೆ. ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಶಿಷ್ಟಾಚಾರವಿದೆ. ಕೇಂದ್ರ ಸಂಸದೀಯ ಮಂಡಳಿಯು ಅಭ್ಯರ್ಥಿ ಆಯ್ಕೆ ಮಾಡುತ್ತದೆ. ಏಕಾಏಕಿ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಇಂತಹವರನ್ನೇ ಗೆಲ್ಲಿಸುವಂತೆ ಅವರು ಮಾಡಿಕೊಂಡ ಮನವಿ ಸರಿಯಲ್ಲ” ಎಂದು ಹೇಳಿದರು.
ಯಡಿಯೂರಪ್ಪ ಹೇಳಿದ್ದೇನು?; ಸಮಾರಂಭದಲ್ಲಿ ಮಾತನಾಡಿದ್ದ ಯಡಿಯೂರಪ್ಪ, ದಾವಣಗೆರೆ ಜಿಲ್ಲೆಯ ಹಲವು ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಸಂಭವನೀಯ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದ್ದರು. “ಹೊನ್ನಾಳಿಯಲ್ಲಿ ಎಂಪಿ ರೇಣುಕಾಚಾರ್ಯ, ಚನ್ನಗಿರಿಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ , ಹರಿಹರದಲ್ಲಿ ಚಂದ್ರಶೇಖರ ಪೂಜಾರ, ದಾವಣಗೆರೆ ಉತ್ತರದಲ್ಲಿ ಲೋಕಕೆರೆ ನಾಗರಾಜ್, ಜಗಳೂರು ಕ್ಷೇತ್ರದಲ್ಲಿ ಎಸ್ವಿ ರಾಮಚಂದ್ರ ಹಾಗೂ ಹರಪನಹಳ್ಳಿಯಲ್ಲಿ ಕರುಣಾಕರ ರೆಡ್ಡಿ ಗೆಲ್ಲಿಸುವಂತೆ” ಮನವಿ ಮಾಡಿದ್ದರು.
2024ರ ಲೋಕಸಭೆ ಚುನಾವಣೆ ಬಳಿಕ ದಾವಣಗೆರೆ ಬಿಜೆಪಿ ಎರಡು ಗುಂಪು ಆಗಿ ಹೋಗಿದೆ. ಮಾಜಿ ಸಂಸದ ಜಿಎಂ ಸಿದ್ದೇಶ್ವರ ಹಾಗೂ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರ ಬಣದ ಕಾರಣಕ್ಕೆ ಬಿಜೆಪಿಯಲ್ಲಿ ಒಮ್ಮತವಿಲ್ಲ.
ಬಿಜೆಪಿ ಸಿಎಂ ಜಗದೀಶ್ ಶೆಟ್ಟರ್ಗೆ ಅಸಮಾಧಾನ ಬಗೆಹರಿಸುವ ಜವಾಬ್ದಾರಿ ನೀಡಿತ್ತು. ಶೆಟ್ಟರ್ ಉಭಯ ನಾಯಕರಿಗೆ ತಿಳಿ ಹೇಳಿ ಮೌನಕ್ಕೆ ಶರಣಾಗಿದ್ದಾರೆ. ಈಗ ಯಡಿಯೂರಪ್ಪ ಅಭ್ಯರ್ಥಿಗಳ ಘೋಷಣೆ ಮಾಡುವ ಮೂಲಕ ದಾವಣಗೆರೆಯ ಅಸಮಾಧಾನ ಮತ್ತೆ ಪ್ರಾರಂಭವಾಗಿದೆ.

