HomeKarnatakaಜಾತ್ರೆಯಲ್ಲಿ ಹತ್ಯೆ: 15 ಅಪರಾಧಿಗಳಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಜಾತ್ರೆಯಲ್ಲಿ ಹತ್ಯೆ: 15 ಅಪರಾಧಿಗಳಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಕೊಪ್ಪಳ: 2019ರಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕಿನ ತಳುವಗೇರಾ ಗ್ರಾಮದಲ್ಲಿ ನಡೆದ ಜಾತ್ರೆ ಸಂದರ್ಭದಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಒಟ್ಟು 15 ಅಪರಾಧಿಗಳಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.

 ದಿನಾಂಕ: 27-03-2019 ರಂದು ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ತಳುವಗೇರಾ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರೆ ಸಂದರ್ಭದಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಪಿರ್ಯಾದಿದಾರರಾದ ಜಗದೀಶ ಹವಾಲ್ದಾರ ಹಾಗೂ ಅವರ ಸ್ನೇಹಿತರು ಪಿಪಿ ಹಾಗೂ ಬಲೂನಗಳನ್ನು ಖರೀದಿಸಿಕೊಂಡು ದುರುಗಮ್ಮ ಗುಡಿಯ ಹತ್ತಿರದಿಂದ ಸಾಗುತ್ತಿದ್ದ ವೇಳೆ, ನಾಗಪ್ಪ ಹುಂಡಿ ಮನೆ ಮುಂದೆ 17 ಜನ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಬಡಿಗೆ, ಕ್ರಿಕೆಟ್ ಸ್ಟಂಪ್, ಕಲ್ಲು ಹಾಗೂ ಖಾರದ ಪುಡಿ ಹಿಡಿದು ಜಗಳಕ್ಕೆ ಮುಂದಾಗಿದ್ದರು. ಈ ವೇಳೆ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಮಲ್ಲಪ್ಪ ಅವರನ್ನು ಕ್ರಿಕೆಟ್ ಸ್ಟಂಪ್ ಹಾಗೂ ಕಲ್ಲಿನಿಂದ ತಲೆಗೆ ಬಲವಾಗಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಜೊತೆಗೆ ಜಗದೀಶ ಹವಾಲ್ದಾರ ಸೇರಿದಂತೆ ಇತರರಿಗೆ ತೀವ್ರ ಹಾಗೂ ಸಾಧಾರಣ ಗಾಯಗಳಾಗಿದ್ದವು. ಮಹಿಳಾ ಆರೋಪಿತರು ಖಾರದ ಪುಡಿ ಎರಚಿ ಜೀವ ಬೆದರಿಕೆ ಹಾಕಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

 ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.55/2019ರಲ್ಲಿ ಐಪಿಸಿ ಕಲಂ 143, 147, 148, 323, 326, 307, 302, 504, 506 ಹಾಗೂ 149 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆಯನ್ನು ಪೊಲೀಸ್ ವೃತ್ತ ನಿರೀಕ್ಷಕರಾದ ಸುರೇಶ್ ತಳವಾರ ಅವರು ನಡೆಸಿ, ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ಈ ಪ್ರಕರಣದ ಆರೋಪಿತರಾದ ಕಳಕಪ್ಪ, ದೊಡ್ಡಪ್ಪ, ನಾಗಪ್ಪ, ರಮೇಶ @ ಕೆಂಪಣ್ಣ, ಕೃಷ್ಣ, ಚಿದಾನಂದ, ಶರಣಪ್ಪ ಬಾಲಪ್ಪ ಹುಂಡಿ, ಬಸವರಾಜ, ಮಂಜುನಾಥ, ಅಮರಪ್ಪ, ನೀಲಪ್ಪ, ಚಂದ್ರಶೇಖರ, ಯಮನೂರಪ್ಪ, ತಿಪ್ಪಣ್ಣ, ಹಾಗೂ ಮುತ್ತಪ್ಪ ಇವರ ಮೇಲಿರುವ ಆರೋಪಗಳು ಸಾಬೀತಾಗಿವೆ ಎಂದು ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ.ಚಂದ್ರಶೇಖರ ಅವರು 2026ರ ಫೆಬ್ರುವರಿ 28ರಂದು ತೀರ್ಪು ಪ್ರಕಟಿಸಿದ್ದರು.

ಎಲ್ಲಾ 15 ಅಪರಾಧಿಗಳಿಗೆ ಭಾ.ದಂ.ಸಂ ಕಲಂ 143, 147, 148, 323, 324, 335, 506, 304(1) ಹಾಗೂ 149 ಅಡಿಯಲ್ಲಿ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು ರೂ. 4,12,500 ಗಳ ದಂಡ ವಿಧಿಸಿದ್ದಾರೆ. ಈ ದಂಡದ ಮೊತ್ತದಲ್ಲಿ 40% ಅಂದರೆ ರೂ. 1,65,000 ಗಳನ್ನು ಮೃತ ಮಲ್ಲಪ್ಪ ಅವರ ತಂದೆ-ತಾಯಿಗೆ ಪರಿಹಾರವಾಗಿ ನೀಡಲು ಹಾಗೂ ತೀವ್ರ ಗಾಯಗೊಂಡ ಶಿವಪ್ಪ ಕಂದಕೂರ ಅವರಿಗೆ 15% ಅಂದರೆ ರೂ. 62,000 ಗಳನ್ನು ನೀಡಲು ತೀರ್ಪಿನಲ್ಲಿ ಆದೇಶಿಸಲಾಗಿದೆ.

 ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಾದ ಕೊಂತವ್ವ ಹಾಗೂ ರೇಣವ್ವ ಇವರ ಮೇಲಿನ ಆರೋಪ ಸಾಬೀತಾಗದ ಕಾರಣ ಅವರನ್ನು ಬಿಡುಗಡೆಗೊಳಿಸಲಾಗಿದೆ.

 ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ.ಎ. ಪಾಟೀಲ್ ವಾದ ಮಂಡಿಸಿದ್ದು, ಸಾಕ್ಷಿದಾರರನ್ನು ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಕುಷ್ಟಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಹನುಮೇಶ ಜಗ್ಗಲ್ ಸಹಕರಿಸಿದ್ದಾರೆ ಎಂದು ಕೊಪ್ಪಳ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ವಿಶೇಷ ಸರ್ಕಾರಿ ಅಭಿಯೋಜಕ ಎಂ.ಎ. ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular