ಭಾರೀ ವಿರೋಧ, ರಾಜಕೀಯ ಜಟಾಪಟಿ ನಡುವೆಯೆ ಚುನಾವಣಾ ಆಯೋಗ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪೂರ್ಣಗೊಳಿಸಿದೆ. 63.66 ಲಕ್ಷ ಮತದಾರರ ಹೆಸರನ್ನು ಕೈ ಬಿಡಲಾಗಿದೆ.
ಈ ವರ್ಷ ವಿಧಾನಸಭೆ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ ಸಹ ಒಂದು. ರಾಜ್ಯದ ವಿಧಾನಸಭೆ ಬಲ 294. ರಾಜ್ಯದಲ್ಲಿ ಅಧಿಕಾರ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 148. ಈ ತಿಂಗಳು ಕೇಂದ್ರ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆ ಇದೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಬಳಿಕ ಪಶ್ಚಿಮ ಬಂಗಾಳದ ಒಟ್ಟು ಮತದಾರರು 7.04 ಕೋಟಿ ಆಗಿದೆ. 60.6 ಲಕ್ಷ ಮತದಾರರಿಗೆ ಸಂಬಂಧಿಸಿದಂತೆ ನ್ಯಾಯಾಂಗ ಅಧಿಕಾರಿಗಳಿಂದ ಪರಿಶೀಲನೆ ನಡೆಯಲಿದ್ದು, ಬಳಿಕ ಅವರ ಹೆಸರು ಉಳಿಸುವ/ ತೆಗೆದು ಹಾಕುವ ಕುರಿತು ಅಂತಿಮ ತೀರ್ಮಾನ ಮಾಡಲಾಗುತ್ತದೆ.
ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಮನೋಜ್ ಕುಮಾರ್ ಅಗರ್ವಾಲ್, “ಎಸ್‌ಐಆರ್ ಭಾಗವಾಗಿ ನಡೆದ ಹೆಸರುಗಳ ಪರಿಶೀಲನೆ ತೆಗೆದು ಹಾಕುವ ಪ್ರಕ್ರಿಯೆ ಬಳಿಕ ಪಶ್ಚಿಮ ಬಂಗಾಳದಲ್ಲಿ 7.04 ಕೋಟಿ ಜನರು ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ” ಎಂದು ಹೇಳಿದ್ದಾರೆ.
ಹೊಸ ಮತದಾರರ ಪಟ್ಟಿಯನ್ನು ಎಸ್‌ಡಿಒ ಮತ್ತು ಬಿಡಿಒ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ. ಫಾರಂ 7 ಮೂಲಕ ಹೆಸರುಗಳ ಸೇರ್ಪಡೆ, ಅಳಿಸುವಿಕೆ ಇನ್ನು ಸಹ ಮುಂದುವರೆಯಲಿದೆ. ಆದ್ದರಿಂದ ಚುನಾವಣೆ ಸಮೀಪವಾಗಿವಾಗ ಮತದಾರರ ಅಂತಿಮ ಪಟ್ಟಿ ಪ್ರಕಟ ಮಾಡಲಾಗುತ್ತದೆ.
ಈಗ ಪಟ್ಟಿ ಮಾಡಿರುವ 60.6 ಲಕ್ಷ ಮತದಾರರಿಗೆ ಸಂಬಂಧಿಸಿದಂತೆ ಪ್ರಕ್ರಿಯೆಗಳು ಮುಗಿದ ಬಳಿಕ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಕೇಂದ್ರ ಚುನಾವಣಾ ಆಯೋಗ ಈ ತಿಂಗಳ ಅಂತ್ಯದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ನಿರೀಕ್ಷೆ ಇದೆ.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪಶ್ಚಿಮ ಬಂಗಾಳದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದನ್ನು ವಿರೋಧಿಸಿ ಟಿಎಂಸಿ ನಾಯಕಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಜನರ ನಾಗರಿಕತ್ವ ಕಸಿಯುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.

