ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ ಯುಎಇ (UAE) ರಾಜಧಾನಿ ಅಬುದಾಬಿಯಲ್ಲಿ ಭಾರಿ ಸ್ಫೋಟದ ಶಬ್ದಗಳು ಕೇಳಿಬಂದಿವೆ. ಕ್ಷಿಪಣಿ ದಾಳಿಯ ಭೀತಿಯಿಂದಾಗಿ ಸ್ಥಳೀಯ ನಿವಾಸಿಗಳಿಗೆ ಸುರಕ್ಷಿತ ಕಟ್ಟಡಗಳಲ್ಲಿ ಆಶ್ರಯ ಪಡೆಯುವಂತೆ ಮೊಬೈಲ್ ಅಲರ್ಟ್‌ಗಳನ್ನು ರವಾನಿಸಲಾಗಿದೆ. ಈ ಆತಂಕದ ವಾತಾವರಣದ ನಡುವೆ ಬೈರ್‌ಸ್ಟೋವ್ ಅವರ ಟ್ವೀಟ್ ಈಗ ಜಾಗತಿಕ ಗಮನ ಸೆಳೆದಿದೆ.
ಟ್ವೀಟ್‌ನಲ್ಲಿ ಏನಿದೆ? ಶನಿವಾರ ಸಂಜೆ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಇರಾನ್ ಮೇಲಿನ ದಾಳಿಯ ಕುರಿತು ಅಧಿಕೃತ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಬೈರ್‌ಸ್ಟೋವ್, ಭಾನುವಾರ ಮುಂಜಾನೆ “ನಮ್ಮನ್ನು ಮನೆಗೆ ತಲುಪಿಸಲು ಸಾಧ್ಯವೇ???” (Can you get us home???) ಎಂದು ಪ್ರಶ್ನಿಸಿದ್ದಾರೆ. ವಿಮಾನಗಳು ರದ್ದಾಗಿರುವುದರಿಂದ ತಾಯ್ನಾಡಿಗೆ ಮರಳಲು ಸಾಧ್ಯವಾಗದೆ ತಂಡವು ಸಂಕಷ್ಟಕ್ಕೆ ಸಿಲುಕಿದೆ.
ಸಂಪರ್ಕ ಕಡಿತಗೊಂಡ ವಿಮಾನಯಾನ ಎಮಿರೇಟ್ಸ್ ಏರ್‌ಲೈನ್ಸ್‌ನೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಬೈರ್‌ಸ್ಟೋವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ವಿಮಾನ ರದ್ದಾದ ನಂತರ ಯಾವುದೇ ಸಂವಹನ ನಡೆದಿಲ್ಲ. ಹಲವು ಬಾರಿ ಪ್ರಯತ್ನಿಸಿದರೂ ಫಲ ಸಿಕ್ಕಿಲ್ಲ” ಎಂದು ಅವರು ಭಾನುವಾರ ಬೆಳಿಗ್ಗೆ ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಕ್ರಿಕೆಟ್ ಪಂದ್ಯ ರದ್ದು ಇಂಗ್ಲೆಂಡ್ ಲಯನ್ಸ್ ಮತ್ತು ಪಾಕಿಸ್ತಾನ ಶಾಹೀನ್ಸ್ ನಡುವೆ ಮಾರ್ಚ್ 1 ರಂದು ನಡೆಯಬೇಕಿದ್ದ ಎರಡನೇ ಏಕದಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ತಿಳಿಸಿದೆ. ಆಟಗಾರರ ಸುರಕ್ಷತೆಯೇ ನಮಗೆ ಮೊದಲ ಆದ್ಯತೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.
ವಿಮಾನ ನಿಲ್ದಾಣಗಳ ಮೇಲೆ ದಾಳಿ ವರದಿಗಳ ಪ್ರಕಾರ, ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಅಬುದಾಬಿಯ ಜಾಯೆದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೇಲೆ ಕ್ಷಿಪಣಿ ದಾಳಿಯ ಪ್ರಭಾವ ಬೀರಿದೆ. ಅಬುದಾಬಿಯ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದುಬೈನ ಬುರ್ಜ್ ಅಲ್ ಅರಬ್ ಹೋಟೆಲ್‌ಗೂ ಹಾನಿಯಾಗಿದೆ ಎಂದು ವರದಿಯಾಗಿದೆ.

