ದುಬೈ: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಯುದ್ಧ ಘೋಷಿಸಿದ ಬೆನ್ನಲ್ಲೇ, ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು ಹಬ್ಬಿದೆ. ಶನಿವಾರ ದುಬೈನ ವಿಶ್ವವಿಖ್ಯಾತ ಪಾಮ್ ಜುಮೇರಾ ದ್ವೀಪದಲ್ಲಿರುವ ಐಷಾರಾಮಿ ‘ಫೇರ್‌ಮಾಂಟ್ ದಿ ಪಾಮ್’ ಹೋಟೆಲ್ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು, ಇದರ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಕ್ಷಿಪಣಿ ಅಪ್ಪಳಿಸಿದ ತಕ್ಷಣ ಹೋಟೆಲ್ ಆವರಣದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರವಾಸಿಗರು ಪ್ರಾಣಭಯದಿಂದ ಓಡುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
ಡ್ರೋನ್ ದಾಳಿಗೆ ನಡುಗಿದ ದುಬೈ ಬ್ರಿಟಿಷ್ ಸುದ್ದಿ ಸಂಸ್ಥೆ ಬಿಬಿಸಿ ದೃಢಪಡಿಸಿರುವ ವಿಡಿಯೋವೊಂದರಲ್ಲಿ, ಡ್ರೋನ್ ಒಂದು ಹೋಟೆಲ್‌ನ ಪ್ರವೇಶ ದ್ವಾರದ ಬಳಿ ಅಪ್ಪಳಿಸುವುದು ಸ್ಪಷ್ಟವಾಗಿ ಕಂಡುಬಂದಿದೆ. ಸ್ಫೋಟದ ತೀವ್ರತೆಗೆ ಆಕಾಶವೆಲ್ಲಾ ಕೇಸರಿ ಬಣ್ಣಕ್ಕೆ ತಿರುಗಿದ್ದು, ದಟ್ಟವಾದ ಕಪ್ಪು ಹೊಗೆ ಇಡೀ ಪ್ರದೇಶವನ್ನು ಆವರಿಸಿದೆ. ಈ ಘಟನೆಯಲ್ಲಿ ಪಾಮ್ ಜುಮೇರಾ ಪ್ರದೇಶದ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ನಾಲ್ವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಬುರ್ಜ್ ಅಲ್ ಅರಬ್ ಮತ್ತು ವಿಮಾನ ನಿಲ್ದಾಣಕ್ಕೂ ಹಾನಿ ಕೇವಲ ಫೇರ್‌ಮಾಂಟ್ ಹೋಟೆಲ್ ಮಾತ್ರವಲ್ಲದೆ, ದುಬೈನ ಮತ್ತೊಂದು ಐಷಾರಾಮಿ ಹೋಟೆಲ್ ಆದ ‘ಬುರ್ಜ್ ಅಲ್ ಅರಬ್’ ಮೇಲೆ ಹಾರುತ್ತಿದ್ದ ಡ್ರೋನ್ ಅನ್ನು ತಡೆದಾಗ ಅದರ ಅವಶೇಷಗಳು ಬಿದ್ದಿದ್ದರಿಂದ ಹಾನಿಯಾಗಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೆ, ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಒಂದು ಭಾಗಕ್ಕೂ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ದುಬೈ ಮಾಧ್ಯಮ ಕಚೇರಿ ತಿಳಿಸಿದೆ. ನಾಗರಿಕ ರಕ್ಷಣಾ ತಂಡಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿವೆ.
ಇರಾನ್‌ನ ಪ್ರತಿದಾಳಿ ಅಮೆರಿಕ ಮತ್ತು ಇಸ್ರೇಲ್ ತನ್ನ ಮೇಲೆ ದಾಳಿ ಮಾಡಿದ ಕೆಲವೇ ಗಂಟೆಗಳಲ್ಲಿ ಇರಾನ್ ಪ್ರತಿಕಾರ ತೀರಿಸಿಕೊಂಡಿದೆ. ಅಮೆರಿಕದ ವಾಯುನೆಲೆಗಳನ್ನು ಹೊಂದಿರುವ ಯುಎಇ, ಬಹ್ರೇನ್, ಕುವೈತ್ ಮತ್ತು ಕತಾರ್ ದೇಶಗಳ ಮೇಲೆ ಸರಣಿ ದಾಳಿ ನಡೆಸಿರುವುದನ್ನು ಇರಾನ್ ಸರ್ಕಾರ ಖಚಿತಪಡಿಸಿದೆ. ಈ ಯುದ್ಧದ ಬೆಳವಣಿಗೆಯಿಂದಾಗಿ ಇಡೀ ಗಲ್ಫ್ ರಾಷ್ಟ್ರಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

