ಬೆಂಗಳೂರು: ನೆಲಮಂಗಲದ ಬೆನ್ನಲ್ಲೇ ವಿಜಯಪುರ ಪುರಸಭೆಯ ಏಳು ಸದಸ್ಯರನ್ನು ಅನರ್ಹಗೊಳಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನಿರ್ಗಮಿತ ಜಿಲ್ಲಾಧಿಕಾರಿ ಬಸವರಾಜ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪುರಸಭೆಯ ಜೆಡಿಎಸ್ ಪಕ್ಷದ ಏಳು ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಲಾಗಿದೆ. ನಾರಾಯಣಸ್ವಾಮಿ, ರಾಜೇಶ್ವರಿ, ಬೈರೇಗೌಡ, ರವಿ, ರಾಧಮ್ಮ, ಪ್ರಕಾಶ್ ಕವಿತಾ ಅನರ್ಹಗೊಂಡ ಸದಸ್ಯರಾಗಿದ್ದಾರೆ.
2025 ರ ಮಾರ್ಚ್ ನಲ್ಲಿ ನಡೆದಿದ್ದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದರು. ಪಕ್ಷಾಂತರ ನಿಷೇಧ ಕಾಯ್ದೆಯಡಿ ಅವರ ಸದಸ್ಯತ್ವ ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದವರ ಸದಸ್ಯತ್ವವನ್ನು ರದ್ದು ಮಾಡಿದ್ದಕ್ಕೆ ಬೆಂಗಳೂರು ಗ್ರಾಮಾಂತರ ಡಿಸಿ ಹುದ್ದೆಯಿಂದ ಬಸವರಾಜ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹುದ್ದೆ ತೋರಿಸದೇ ಜಿಲ್ಲಾಧಿಕಾರಿಯ ದಿಢೀರ್ ವರ್ಗಾವಣೆ ಚರ್ಚೆಗೆ ಕಾರಣವಾಗಿದೆ.

