HomeKarnatakaಹಾಸನ ವಿಮಾನ ನಿಲ್ದಾಣ: ಯೋಜನೆ ಇಷ್ಟು ವಿಳಂಬ ಏಕೆ?

ಹಾಸನ ವಿಮಾನ ನಿಲ್ದಾಣ: ಯೋಜನೆ ಇಷ್ಟು ವಿಳಂಬ ಏಕೆ?

ದಶಕಗಳ ಕಾಲದ ಯೋಜನೆಯೊಂದು ಹಾಸನ ಜಿಲ್ಲೆಯಲ್ಲಿ ಕುಂಟುತ್ತಾ ಸಾಗಿದೆ. ಅನುದಾನದ ಕೊರತೆ, ರಾಜಕೀಯ ಇಚ್ಛಾಶಕ್ತಿಯ ಸಮಸ್ಯೆಯ ಕಾರಣಕ್ಕೆ ಹಾಸನ ಸಮೀಪ ಭುವನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆ ಅಂದುಕೊಂಡಷ್ಟು ವೇಗವಾಗಿ ಸಾಗುತ್ತಿಲ್ಲ. ವಿಮಾನದಲ್ಲಿ ಸಂಚಾರ ನಡೆಸುವ ಜಿಲ್ಲೆಯ ಜನರ ಕನಸು ಇನ್ನೂ ನನಸಾಗಿಲ್ಲ.

ಉಡಾನ್ ಯೋಜನೆಯಡಿ ಹಾಸನ ವಿಮಾನ ನಿಲ್ದಾಣ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಕೆಲವು ದಿನಗಳ ಹಿಂದೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಹ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.

ಆದರೆ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಕಾಮಗಾರಿ ವಿಳಂಬವಾಗುತ್ತಿದೆ. ಯಾವಾಗ ಕಾಮಗಾರಿ ಮುಕ್ತಾಯಗೊಂಡು ವಿಮಾನ ಸಂಚಾರ ಆರಂಭವಾಗುತ್ತದೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಸನ ವಿಮಾನ ನಿಲ್ದಾಣ ಯೋಜನೆ: ಸದ್ಯದ ಮಾಹಿತಿ ಪ್ರಕಾರ ಹಾಸನ ವಿಮಾನ ನಿಲ್ದಾಣ ಯೋಜನೆಗೆ ಅನುದಾನ ಕೊರತೆ ಮತ್ತು ಭೂಸ್ವಾಧೀನ ಸಮಸ್ಯೆ ಉಂಟಾಗಿದೆ. ಟರ್ಮಿನಲ್ ಕಟ್ಟಡ, ಏರ್ ಟ್ರಾಫಿಕ್ ಕಂಟ್ರೋಲ್ ಟವರ್, ರನ್‌ವೇ ಮತ್ತು ಏಪ್ರನ್ ಸೇರಿದಂತೆ ಶೇ. 80ಕ್ಕೂ ಹೆಚ್ಚು ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ.

ಹಾಸನ ನಗರದಿಂದ 6 ಕಿ.ಮೀ. ದೂರದಲ್ಲಿರುವ ಭುವನಹಳ್ಳಿಯ ಸಮೀಪ 516 ಎಕರೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. ಈ ವಿಮಾನ ನಿಲ್ದಾಣ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಕನಸು.

2006ರಲ್ಲಿ ಈ ಯೋಜನೆಗೆ ದೇವೇಗೌಡರು ಶಂಕುಸ್ಥಾಪನೆ ನೆರವೇರಿಸಿದ್ದರು. ಆಗ ಸರ್ಕಾರವು ಈ ಯೋಜನೆಗೆ 244.33 ಎಕರೆ ಖರಾಬು ಜಮೀನು ಸೇರಿದಂತೆ ಒಟ್ಟು 1224.16 ಎಕರೆ ಜಮೀನನ್ನು ಮೀಸಲಿಟ್ಟಿತ್ತು. ಆದರೆ 2026 ಬಂದರೂ ವಿಮಾನ ಹಾರಾಟ ಇನ್ನು ಪ್ರಾರಂಭವಾಗಿಲ್ಲ.

ಈ ವಿಮಾನ ನಿಲ್ದಾಣ ಯೋಜನೆಗೆ ಮೊದಲು ವಿಮಾನಯಾನ ತರಬೇತಿ ಕೇಂದ್ರ, ಒಳನಾಡು ಕಂಟೇನರ್ ಕೇಂದ್ರ, ಗಾಲ್ಫ್ ಕೋರ್ಸ್, ಹೋಟೆಲ್, ತಂತ್ರಜ್ಞಾನ ಪಾರ್ಕ್ ಮತ್ತು ರಫ್ತಿಗೆ ಮುನ್ನ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳನ್ನು ಸಂಗ್ರಹಿಸಲು ಬೃಹತ್ ಶೀತಲಗೃಹವನ್ನು ಒಳಗೊಂಡ ಕಾರ್ಗೋ ಟರ್ಮಿನಲ್ ಯೋಜನೆ ರೂಪಿಸಲಾಗಿತ್ತು.

ಆದರೆ ಬಳಿಕ ರಾಜ್ಯ ಸರ್ಕಾರವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲ ಯೋಜನೆ ಕೈಬಿಟ್ಟು, ಕಡಿಮೆ ವೆಚ್ಚದ ವಿಮಾನ ನಿಲ್ದಾಣವನ್ನು ನಿರ್ಮಿಸಲು ನಿರ್ಧರಿಸಿತು. ಆದರೆ ಆ ಯೋಜನೆ ಸಹ ಇನ್ನೂ ಪೂರ್ಣಗೊಂಡಿಲ್ಲ.

ಯೋಜನೆ ವಿಳಂಬವಾದ ಕಾರಣ ಇದನ್ನು ಕೇಂದ್ರ ವಿಮಾನಯಾನ ಸಚಿವಾಲಯದ ಉಡಾನ್ ಯೋಜನೆಯಡಿ ಕೈಗೆತ್ತಿಕೊಳ್ಳಲಾಯಿತು. ವಿಮಾನ ನಿಲ್ದಾಣದ ಸ್ಥಳದಲ್ಲಿ ಹಾದು ಹೋಗುವ ಹೈ-ಟೆನ್ಷನ್ ವಿದ್ಯುತ್ ತಂತಿಗಳಿಂದಾಗಿ ಈ ಯೋಜನೆಯು ವಿಳಂಬವಾಯಿತು ಎನ್ನುತ್ತಾರೆ ಅಧಿಕಾರಿಗಳು.

ತಮ್ಮ ಜಮೀನುಗಳಲ್ಲಿ ಹೊಸ ವಿದ್ಯುತ್ ಟವರ್‌ ಅಳವಡಿಸಲು ಪಕ್ಕದ ಜಮೀನಿನ ರೈತರು ಭಾರೀ ಪರಿಹಾರದ ಬೇಡಿಕೆಯಿಟ್ಟಿದ್ದರು. ಅಂತಿಮವಾಗಿ, ಅಧಿಕಾರಿಗಳು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಟವರ್‌ಗಳನ್ನು ಬೇರೆಡೆಗೆ ಸ್ಥಳಾಂತರಿಸಿದರು. ಬಳಿಕ ಕಾಮಗಾರಿ ಆರಂಭವಾಯಿತು.

ಈಗ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ವಿಮಾನ ನಿಲ್ದಾಣ ಮತ್ತು ಹಾಸನ ನಗರದ ನಡುವೆ ಸಂಪರ್ಕ ರಸ್ತೆಗಳನ್ನು ನಿರ್ಮಿಸಲು ಹೊಸದಾಗಿ ಭೂಸ್ವಾಧೀನ ಮಾಡಿಕೊಳ್ಳಲು 143.67 ಕೋಟಿ ರೂಪಾಯಿಗಳ ಅನುದಾನ ಬೇಕು ಎಂದು ಹೇಳಿದೆ. ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಉಳಿದ ಕಾಮಗಾರಿ ಪೂರ್ಣಗೊಳಿಸಲು ಇನ್ನೂ 200 ಕೋಟಿ ರೂಪಾಯಿಗಳ ಅಗತ್ಯವಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ 2026ರ ಬಜೆಟ್‌ನಲ್ಲಿ ಹಾಸನ ವಿಮಾನ ನಿಲ್ದಾಣಕ್ಕೆ ಅನುದಾನ ನೀಡಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular