ಮಂಗಳೂರು: ಉದ್ಯೋಗದ ಆಮಿಷವೊಡ್ಡಿ ವಿದ್ಯಾರ್ಥಿಗಳಿಂದ ಹಣ ಪಡೆದು ಕಂಪನಿಯೊಂದು ವಂಚಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದಿದೆ.
ಕೆಲಸ ಆಸೆಗೆ ಕಂಪನಿ ಆಮಿಷಕ್ಕೆ ಮರುಳಾಗಿ ಹಣ ಕಳೆದುಕೊಂಡಿರುವ ನೂರಾರು ವಿದ್ಯಾರ್ಥಿಗಳು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಹಾರಾಷ್ಟ್ರ ಮೂಲದ ‘ವೆಕ್ಸಾನ್’ ಎಂಬ ಕಂಪನಿ, BMP ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೆಬ್ ಡಿಸೈನರ್ ಹಾಗೂ ವೆಬ್ ಡೆವಲಪರ್ ಹುದ್ದೆಗಳಿಗಾಗಿ ಜಾಹೀರಾತು ನೀಡುತ್ತು.
ಮಂಗಳೂರು ನಗರದ ಅಳಕೆ–ಕುದ್ರೋಳಿ ಭಾಗದ ಬಿರ್ವಾ ಕಾಂಪ್ಲೆಕ್ಸ್ ಮೂರನೇ ಮಹಡಿಯಲ್ಲಿ ಕಂಪನಿ ತನ್ನ ಕಚೇರಿ ತೆರೆದಿತ್ತು. ಮೊದಲು ಮೂರು ದಿನಗಳ ತರಬೇತಿ ನೀಡುವುದಾಗಿ ಹೇಳಿ ಅಭ್ಯರ್ಥಿಗಳಿಂದ ತಲಾ 2,500 ರೂಪಾಯಿ ವಸೂಲಿ ಮಾಡಿದೆ. ತರಬೇತಿ ವೇಳೆ ಕೆಲವೇ ತಿಂಗಳಲ್ಲಿ ಲಕ್ಷಾಂತರ ಆದಾಯ ಗಳಿಸಬಹುದು ಎಂದು ನಂಬಿಸಿ 11 ಸಾವಿರದಿಂದ 51 ಸಾವಿರ ರೂಪಾಯಿವರೆಗೆ ಹೂಡಿಕೆ ಮಾಡುವಂತೆ ಒತ್ತಾಯಿಸಿದೆ.
ಹಣವಿಲ್ಲದಿದ್ದರೆ ಮನೆಯಿಂದ ಸುಳ್ಳು ಹೇಳಿ ತರಲು, ಚಿನ್ನ ಅಡವಿಡಲು ಕಂಪನಿ ಸಿಬ್ಬಂದಿಗಳು ಸಲಹೆ ನೀಡಿದ್ದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಹೂಡಿಕೆ ಮಾಡಿದ ಹಣಕ್ಕೆ ಮೊಬೈಲ್ ಚಾರ್ಜರ್, ಇಯರ್‌ಫೋನ್, ಸೀರೆ, ಕಾಸ್ಮೆಟಿಕ್ ವಸ್ತುಗಳನ್ನು ನೀಡಿ, ಮತ್ತಷ್ಟು ಜನರನ್ನು ಸೇರಿಸಿದರೆ ಕಮಿಷನ್ ಸಿಗುತ್ತದೆ ಎಂದು ಆಮಿಷ ಒಡ್ಡಲಾಗುತ್ತಿತ್ತಂತೆ. ಅದಲ್ಲದಂತೆ ಒಬ್ಬ ವಿದ್ಯಾರ್ಥಿ ಇನ್ನೋ ಮೂವರನ್ನು ಕರೆತಂದರೆ 11 ಸಾವಿರ ಕಮಿಷನ್ ನೀಡುವುದಾಗಿಯೂ ಭರವಸೆ ನೀಡಲಾಗಿತ್ತು.
ಹಣ ನೀಡಿದ ಬಳಿಕ ಉದ್ಯೋಗವೂ ಇಲ್ಲ, ಹೂಡಿಕೆ ಮಾಡಿದ ಹಣವೂ ಹಿಂತಿರುಗಿಸಿಲ್ಲ. ಹಣ ಕಳೆದುಕೊಂಡ ಕೆಲ ವಿದ್ಯಾರ್ಥಿಗಳು ಒತ್ತಡದಿಂದ ಆತ್ಮಹತ್ಯೆಗೂ ಯತ್ನಿಸಿರುವ ಘಟನೆ ನಡೆದಿದೆ. ಮಂಗಳೂರಿನ ಸ್ವಸ್ತಿಕ್ ಸ್ಕೂಲ್ ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಹಣ ಕಳೆದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದಂತೆ ಕಂಪನಿ ಹಣವನ್ನು ಹಿಂತಿರುಗಿಸಿದೆಯಂತೆ.
ಉಳಿದ ವಿದ್ಯಾಅರ್ಥಿಗಳಿಗೆ ಯಾವುದೇ ಹಣ ವಾಪಸ್ ಬಂದಿಲ್ಲ. ಇದರಿಂದ ನೊಂದ ವಿದ್ಯಾರ್ಥಿಗಳು ಕಂಪನಿ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

