ದೇಶದಲ್ಲಿ ಕಡಿಮೆ ಆದಾಯವಿರುವ ಕುಟುಂಬಗಳಿಗೆ ಮೈಕ್ರೋಫೈನಾನ್ಸ್ (ಸೂಕ್ಷ್ಮ ಹಣಕಾಸು) ಸಾಲಗಳು ಪ್ರಮುಖ ಆರ್ಥಿಕ ನೆರವಾಗುತ್ತಿವೆ. ಸಾಮಾನ್ಯ ಬ್ಯಾಂಕ್ ಸಾಲಗಳನ್ನು ಪಡೆಯಲು ಸಾಧ್ಯವಾಗದ ವರ್ಗದವರಿಗೆ ಸಣ್ಣ ವ್ಯಾಪಾರ ಪ್ರಾರಂಭಿಸಲು, ಶಿಕ್ಷಣ ಮತ್ತು ತುರ್ತು ಖರ್ಚುಗಳಿಗಾಗಿ ಇವು ಸಹಕಾರಿಯಾಗಿವೆ. ಈ ಸಾಲ ಮರುಪಾವತಿಯಲ್ಲಿನ ಸುಲಭತೆ ಮತ್ತು ಅವಧಿಗಿಂತ ಮುಂಚಿತವಾಗಿ ಸಾಲ ತೀರಿಸಿದರೆ ಯಾವುದೇ ದಂಡವಿಲ್ಲದಿರುವುದು ಇದರ ಪ್ರಮುಖ ಅನುಕೂಲಗಳು.
ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಮದಂತೆ, ವಾರ್ಷಿಕ ಆದಾಯ ರೂ. 3 ಲಕ್ಷದವರೆಗೆ ಇರುವ ಕುಟುಂಬಗಳು ಈ ಸಾಲಕ್ಕೆ ಅರ್ಹರಾಗಿರುತ್ತಾರೆ.ಈ ಸಾಲ ಪಡೆಯಲು ಭೂಮಿ, ಮನೆ ಅಥವಾ ಚಿನ್ನದಂತಹ ಯಾವುದೇ ಆಸ್ತಿಯನ್ನು ಗಿರವಿ ಇಡುವ (ಪೂಚೀಕತ್ತು) ಅಗತ್ಯವಿಲ್ಲ. ಒಂದು ವೇಳೆ ಸೆಕ್ಯೂರಿಟಿ ಪಡೆದರೆ ಅದು ಮೈಕ್ರೋಫೈನಾನ್ಸ್ ವರ್ಗಕ್ಕೆ ಬರುವುದಿಲ್ಲ.
ಸಾಲದ ಮೊತ್ತ: ಸಾಮಾನ್ಯವಾಗಿ ಸಾಲದ ಮಿತಿ ರೂ. 10,000 ರಿಂದ ರೂ. 1.25 ಲಕ್ಷದವರೆಗೆ ಇರುತ್ತದೆ.ಶಿಕ್ಷಣ, ಕೃಷಿ, ಸಣ್ಣ ವ್ಯಾಪಾರ, ಗೃಹೋಪಯೋಗಿ ವಸ್ತುಗಳ ಖರೀದಿ ಅಥವಾ ಆದಾಯ ಹೆಚ್ಚಿಸುವ ಚಟುವಟಿಕೆಗಳಿಗಾಗಿ ಈ ಸಾಲ ಬಳಸಬಹುದು.
ಮರುಪಾವತಿ ಅವಧಿ: ಸಾಲವನ್ನು ಮರುಪಾವತಿಸಲು ಸಾಮಾನ್ಯವಾಗಿ 1 ರಿಂದ 3 ವರ್ಷಗಳ ಕಾಲಾವಕಾಶವಿರುತ್ತದೆ.
ಸೌಲಭ್ಯಗಳು ಮತ್ತು ನಿಯಮಗಳು
ಕಂತುಗಳ ಪಾವತಿ: ಸಾಲಗಾರರು ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಕಂತುಗಳನ್ನು ಪಾವತಿಸುವ ಅವಕಾಶವಿರುತ್ತದೆ.
ಆದಾಯದ ಮಿತಿ: ಕುಟುಂಬದ ಒಟ್ಟು ಆದಾಯದಲ್ಲಿ ಸಾಲದ ಕಂತಿನ ಮೊತ್ತವು ಶೇ. 50ಕ್ಕಿಂತ ಹೆಚ್ಚಿರಬಾರದು ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
ದಂಡವಿಲ್ಲ: ಸಾಲವನ್ನು ನಿಗದಿತ ಅವಧಿಗಿಂತ ಮುಂಚಿತವಾಗಿ ಪಾವತಿಸಿದರೆ (Pre-payment) ಯಾವುದೇ ರೀತಿಯ ದಂಡ ಅಥವಾ ಜರಿಮಾನೆ ವಿಧಿಸುವಂತಿಲ್ಲ.
ಬಡ್ಡಿ ದರ: ಬಡ್ಡಿ ದರಗಳ ಮೇಲೆ ಸ್ಥಿರ ಮಿತಿ ಇಲ್ಲದಿದ್ದರೂ, ಸಂಸ್ಥೆಗಳು ಅನಗತ್ಯವಾಗಿ ಹೆಚ್ಚಿನ ಬಡ್ಡಿ ವಸೂಲಿ ಮಾಡುವಂತಿಲ್ಲ. ಸಂಸ್ಥೆಯ ನಿರ್ವಹಣಾ ವೆಚ್ಚ ಮತ್ತು ಅಪಾಯದ ಆಧಾರದ ಮೇಲೆ ಬೋರ್ಡ್ ಅನುಮೋದಿಸಿದ ದರದಂತೆ ಬಡ್ಡಿ ನಿರ್ಧರಿಸಬೇಕು.
ಸಾಲ ನೀಡುವ ಸಂಸ್ಥೆಗಳು
ಆರ್ಬಿಐ ನಿಯಂತ್ರಣದಲ್ಲಿರುವ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು (Small Finance Banks), ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, NBFCಗಳು, NBFC-MFIಗಳು, ಸಹಕಾರ ಬ್ಯಾಂಕುಗಳು, ಸ್ವಸಹಾಯ ಸಂಘಗಳು (SHG) ಮತ್ತು ಎನ್ಜಿಒಗಳು ಮಾತ್ರ ಈ ಸಾಲಗಳನ್ನು ನೀಡಲು ಅಧಿಕಾರ ಹೊಂದಿವೆ.
ಸಾಲ ಪಡೆಯುವ ಹಂತ ಹಂತದ ವಿಧಾನ:
1) ಅರ್ಹತೆಯನ್ನು ಪರಿಶೀಲಿಸಿ: ಈ ಸಾಲವು ಕೇವಲ ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ಮಾತ್ರ ಲಭ್ಯ. ನಿಮ್ಮ ಕುಟುಂಬದ (ಗಂಡ, ಹೆಂಡತಿ ಮತ್ತು ಅವಿವಾಹಿತ ಮಕ್ಕಳು) ಒಟ್ಟು ಆದಾಯ ವರ್ಷಕ್ಕೆ 3 ಲಕ್ಷ ರೂಪಾಯಿ ಮೀರಬಾರದು.
ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ:
• ಗುರುತಿನ ಚೀಟಿ: ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ.
• ವಿಳಾಸದ ಪುರಾವೆ: ಪಡಿತರ ಚೀಟಿ (Ration Card) ಅಥವಾ ವಿದ್ಯುತ್ ಬಿಲ್.
• ಬ್ಯಾಂಕ್ ವಿವರ: ಕಳೆದ 6 ತಿಂಗಳ ಬ್ಯಾಂಕ್ ಪಾಸ್ಬುಕ್ ಪ್ರತಿ.
• ಭಾವಚಿತ್ರ: ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋಗಳು.
ಎಲ್ಲಿ ಅರ್ಜಿ ಸಲ್ಲಿಸಬೇಕು ?
ಈ ಸಾಲವನ್ನು ಪಡೆಯಲು ನೀವು ನೇರವಾಗಿ ದೊಡ್ಡ ಬ್ಯಾಂಕುಗಳಿಗೆ ಹೋಗುವ ಅಗತ್ಯವಿಲ್ಲ. ಕೆಳಗಿನ ಸಂಸ್ಥೆಗಳನ್ನು ಸಂಪರ್ಕಿಸಬಹುದು:
• ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (RRBs): ಉದಾಹರಣೆಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್.
• NBFC-MFI ಸಂಸ್ಥೆಗಳು: ಸಣ್ಣ ಹಣಕಾಸು ಒದಗಿಸುವ ನೋಂದಾಯಿತ ಸಂಸ್ಥೆಗಳು.
• ಸ್ವಸಹಾಯ ಸಂಘಗಳು (SHG): ನೀವು ಸ್ತ್ರೀಶಕ್ತಿ ಅಥವಾ ಯಾವುದಾದರೂ ಸಂಘದ ಸದಸ್ಯರಾಗಿದ್ದರೆ ಸುಲಭವಾಗಿ ಪಡೆಯಬಹುದು.
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
• ನಿಮ್ಮ ಹತ್ತಿರದ ಮೈಕ್ರೋಫೈನಾನ್ಸ್ ಕೇಂದ್ರ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.
• ‘ಮೈಕ್ರೋಫೈನಾನ್ಸ್ ಲೋನ್’ ಅಥವಾ ‘ಜೆಎಲ್ಜಿ (Joint Liability Group)’ ಸಾಲದ ಬಗ್ಗೆ ವಿಚಾರಿಸಿ.
• ಅರ್ಜಿಯನ್ನು ಭರ್ತಿ ಮಾಡಿ ದಾಖಲೆಗಳನ್ನು ಸಲ್ಲಿಸಿ. ನಿಮ್ಮ ಆದಾಯದ ಬಗ್ಗೆ ಅವರು ಸ್ಥಳೀಯವಾಗಿ ಪರಿಶೀಲನೆ ನಡೆಸುತ್ತಾರೆ.

