ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆಯ ಕುರಿತು ಚರ್ಚೆಗಳು ನಡೆಯುತ್ತಿವೆ. ವಿವಿಧ ವಿದ್ಯುತ್ ಸರಬರಾಜು ಕಂಪನಿಗಳು ದರ ಏರಿಕೆ ಮಾಡಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಮುಂದೆ ಬೇಡಿಕೆ ಇಟ್ಟಿವೆ. ಏಪ್ರಿಲ್‌ನಿಂದ ದರ ಏರಿಕೆ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಕೃಷಿ, ವಾಣಿಜ್ಯ ಹಾಗೂ ಕೈಗಾರಿಕಾ ಬಳಕೆದಾರರಿಗೆ ಸಂಬಂಧಿಸಿದ 2025–26ನೇ ಆರ್ಥಿಕ ವರ್ಷದ ವಿದ್ಯುತ್ ದರ ಪರಿಷ್ಕರಣೆ ಕುರಿತ ಆನ್‌ಲೈನ್ ಮೂಲಕ ಜನರ ಸಲ್ಲಿಸಿದ ಅಹವಾಲುಗಳನ್ನು ವಿಚಾರಣೆ ನಡೆಸಿತು.
ವಿದ್ಯುತ್ ದರಗಳ ಪರಿಷ್ಕರಣೆಗಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಚೆಸ್ಕಾಂ) ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ನಿಗಮದ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆನ್‌ಲೈನ್ ಮೂಲಕ ಸಾರ್ವಜನಿಕ ಅರ್ಜಿ ವಿಚಾರಣೆ ನಡೆಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ ರಾಜು, ಕೃಷಿ, ವಾಣಿಜ್ಯ ಹಾಗೂ ಕೈಗಾರಿಕಾ ಗ್ರಾಹಕರಿಗೆ ಅನ್ವಯಿಸುವ ದರ ಪರಿಷ್ಕರಣೆ ವಿದ್ಯುತ್ ದರ ಪರಿಷ್ಕರಣೆ ವಿಷಯ ಪ್ರಸ್ತಾಪಿಸುವ ಮೂಲಕ ದರ ಪರಿಷ್ಕರಣೆ ಮಾಡುವಂತೆ ಮನವಿ ಮಾಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಕೈಗಾರಿಕಾ ಸಂಘಗಳ ಪ್ರಮುಖರು, ವಿದ್ಯುತ್ ದರ ಏರಿಕೆಯಿಂದ ಸಾಮಾನ್ಯ ಜನತೆ ಮತ್ತು ಸಣ್ಣ ಕೈಗಾರಿಕೆಗಳ ಮೇಲೆ ಆರ್ಥಿಕ ಹೊರೆಯಾಗಲಿದೆ ಎಂದು ಹೇಳಿದರು.
ಆದ್ದರಿಂದ ದರ ಏರಿಕೆ ಕುರಿತಂತೆ ಸೆಸ್ಕ್ ಹಾಗೂ ರಾಜ್ಯದ ಇತರೆ ಎಸ್ಕಾಂಗಳು ಸಲ್ಲಿಸಿರುವ ದರ ಪರಿಷ್ಕರಣೆ ಅರ್ಜಿಯನ್ನು ಪರಿಗಣಿಸದೆ, ವಿದ್ಯುತ್ ದರ ಪರಿಷ್ಕರಣೆಯಲ್ಲಿ ಸಮತೋಲನ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು.

