ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ( ಫೆಬ್ರವರಿ 25 ) ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದು, ನ್ಯೂಜಿಲೆಂಡ್ 61 ರನ್ಗಳ ಭರ್ಜರಿ ಗೆಲುವನ್ನು ಕಂಡಿದೆ. ಈ ಮೂಲಕ ಸೂಪರ್ 8 ಸುತ್ತಿನಲ್ಲಿ ಸತತ ಎರಡು ಸೋಲು ಕಂಡ ಶ್ರೀಲಂಕಾ ಟೂರ್ನಿಯಿಂದ ಹೊರಬಿದ್ದಿದೆ. ತವರಿನಲ್ಲೇ ಶ್ರೀಲಂಕಾ ಈ ಮುಖಭಂಗಕ್ಕೊಳಗಾಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆರಿಸಿಕೊಂಡು ನ್ಯೂಜಿಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ನ್ಯೂಜಿಲೆಂಡ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 168 ರನ್ ಕಲೆಹಾಕಿ ಶ್ರೀಲಂಕಾಗೆ 169 ರನ್ಗಳ ಪೈಪೋಟಿಯುತ ಗುರಿಯನ್ನು ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫಲವಾದ ಲಂಕಾ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 107 ರನ್ ಕಲೆಹಾಕಿದೆ.
ನ್ಯೂಜಿಲೆಂಡ್ ಇನ್ನಿಂಗ್ಸ್: ತಂಡ 34 ರನ್ಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಆರಂಭಿಕರಾದ ಫಿನ್ ಅಲೆನ್ 23 ರನ್ ಕಲೆಹಾಕಿದರೆ, ಟಿಮ್ ಸೈಫರ್ಟ್ 8 ರನ್ ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಚಿನ್ ರವೀಂದ್ರ 32 ರನ್ ಬಾರಿಸಿದರೆ, ಮತ್ತೊಂದೆಡೆ ಗ್ಲೆನ್ ಫಿಲಿಪ್ಸ್ 18, ಡ್ಯಾರಿಲ್ ಮಿಚೆಲ್ 3, ಮಾರ್ಕ್ ಚಾಂಪ್ಮನ್ ಡಕ್ಔಟ್ ಆದರು. ಅಲ್ಲಿಗೆ ಕಿವೀಸ್ 84 ರನ್ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಮಯದಲ್ಲಿ ಏಳನೇ ವಿಕೆಟ್ಗೆ ಜತೆಯಾದ ನಾಯಕ ಮಿಚೆಲ್ ಸ್ಯಾಂಟ್ನರ್ ಹಾಗೂ ಕೋಲ್ ಮೆಕ್ಕೋನ್ಷಿ 84 ರನ್ಗಳ ಜತೆಯಾಟವನ್ನಾಡಿ ತಂಡಕ್ಕೆ ಸುಧಾರಣೆ ತಂದರು. ಸ್ಯಾಂಟ್ನರ್ 26 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 47 ರನ್ ಬಾರಿಸಿದರೆ, ಮೆಕ್ಕೋನ್ಷಿ 23 ಎಸೆತಗಳಲ್ಲಿ ಅಜೇಯ 31 ರನ್ ಬಾರಿಸಿದರು.
ಶ್ರೀಲಂಕಾ ಪರ ಮಹೀಶ್ ತೀಕ್ಷಣ ಹಾಗೂ ದುಷ್ಮಂತ ಚಮೀರ ತಲಾ ಮೂರು ವಿಕೆಟ್ ಪಡೆದರೆ, ದುನಿತ್ ವೆಲ್ಲಲಾಗೆ ಒಂದು ವಿಕೆಟ್ ಪಡೆದರು.
ಶ್ರೀಲಂಕಾ ಇನ್ನಿಂಗ್ಸ್: ಕಿವೀಸ್ ನೀಡಿದ ಪೈಪೋಟಿಯುತ ಮೊತ್ತ ಬೆನ್ನಟ್ಟಲು ಬಂದ ಲಂಕಾ ಆರಂಭಿಕ ಆಟಗಾರ ಪತುಮ್ ನಿಸ್ಸಂಕ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ಬೆನ್ನಲ್ಲೇ ಚರಿತ್ ಅಸಲಂಕ 5, ಕುಸಾಲ್ ಮೆಂಡಿಸ್ 11, ಪವನ್ ರತ್ನಾಯಕೆ 10, ದಸುನ್ ಶನಕ 3, ದುಷನ್ ಹೇಮಂತ 3 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಹೀಗೆ ಕಿವೀಸ್ ಬೌಲಿಂಗ್ ದಾಳಿಗೆ ಕೇವಲ 56 ರನ್ಗಳಿಗೆ ತನ್ನ 6 ವಿಕೆಟ್ ಕಳೆದುಕೊಂಡ ಲಂಕಾ ಗೆಲುವಿನ ಆಸೆಯನ್ನು ಕೈಚೆಲ್ಲಿತ್ತು. ಕಮಿಂದು ಮೆಂಡಿಸ್ 31 ರನ್ ಗಳಿಸಿದರೆ, ದುನಿತ್ ವೆಲ್ಲಲಾಗೆ 29 ರನ್ ಗಳಿಸಿದರು. ಲಂಕಾ ಪರ 20+ ರನ್ ಬಾರಿಸಿದ್ದು ಈ ಇಬ್ಬರೇ. ಇನ್ನುಳಿದಂತೆ ದುಷ್ಮಂತ ಚಮೀರ ಅಜೇಯ 7 ಹಾಗೂ ಮಹೀಶ್ ತೀಕ್ಷಣ ಅಜೇಯ 1 ರನ್ ಗಳಿಸಿದರು.
ನ್ಯೂಜಿಲೆಂಡ್ ಪರ ರಚಿನ್ ರವೀಂದ್ರ 4 ವಿಕೆಟ್ ಪಡೆದು ಲಂಕಾ ಪಾಲಿಗೆ ಖಳನಾಯಕನಾದರು. ಮ್ಯಾಟ್ ಹೆನ್ರಿ ಎರಡು ವಿಕೆಟ್ ಪಡೆದರೆ, ಗ್ಲೆನ್ ಫಿಲಿಪ್ಸ್ ಹಾಗೂ ಮಿಚೆಲ್ ಸ್ಯಾಂಟ್ನರ್ ತಲಾ ಒಂದೊಂದು ವಿಕೆಟ್ ಪಡೆದರು.

