ರಾಮನಗರ: ಮನೆ ಬೀಗ ಮುರಿದು ಅರ್ಧ ಕೆಜಿ ಚಿನ್ನ ಕಳವು ಮಾಡಿದ ಘಟನೆ ರಾಮನಗರದ ದ್ಯಾವರಸೇಗೌಡನ ದೊಡ್ಡಿ ಸಮೀಪ ನಡೆದಿದೆ.
ಸಾಫ್ಟ್ವೇರ್ ಉದ್ಯೋಗಿಯಾಗಿರುವ ಲಿಖಿತ್ ಅವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಅರ್ಧ ಕೆಜಿ ಚಿನ್ನ ದೋಚಿ ಪರಾರಿಯಾಗಿದ್ದಾರೆ. ಸಂಜೆ ಲಿಖಿತ್ ಮನೆಗೆ ಬಂದಾಗ ಬೀಗ ಮುರಿದಿರುವುದು ಕಂಡು ಬಂದಿದೆ. ನಂತರ ಬೆಡ್ರೂಮ್ ನ ಕಬೋಡ್ ಗಮನಿಸಿದಾಗ ಚಿನ್ನಾಭರಣ ಕಳ್ಳತನ ಮಾಡಿರುವುದು ಗೊತ್ತಾಗಿದೆ.
ಕಳ್ಳರು ಚಿನ್ನಾಭರಣ ದೋಚಿದ್ದಲ್ಲದೆ ಸಿಸಿಟಿವಿ ಡಿವಿಆರ್ ಕೂಡ ತೆಗೆದುಕೊಂಡು ಹೋಗಿದ್ದಾರೆ. ಸ್ಥಳಕ್ಕೆ ರಾಮನಗರ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಕ್ಕಪಕ್ಕದ ಮನೆಯ ಸಿಸಿಟಿವಿ ಪರಿಶೀಲನೆ ಮಾಡಿ ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.

