ಬೆಂಗಳೂರು: ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ಪ್ರತಿ ಲೀಟರ್ ಗೆ 5ರಿಂದ 7 ರೂಪಾಯಿಗೆ ಹೆಚ್ಚಿಸಬೇಕು ಎಂದು ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
ಬೆಳಗಾವಿಯಲ್ಲಿ ಕಳೆದ ಡಿಸೆಂಬರ್ ನಲ್ಲಿ ನಡೆದ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರೋತ್ಸಾಹಧನ ಹೆಚ್ಚಳ ಬಗ್ಗೆ ಘೋಷಿಸಿದ್ದರೂ ಅದಿನ್ನೂನ್ನು ಜಾರಿಯಾಗಿಲ್ಲ. ಬಜೆಟ್ ನಲ್ಲಿ ಪ್ರಕಟಿಸಿ ಜಾರಿ ಮಾಡುವ ನಿರೀಕ್ಷೆ ಇದೆ.
ರಾಜ್ಯದಲ್ಲಿ ಹಾಲಿನ ಉತ್ಪಾದನೆ ಗಣನೀಯ ಏರಿಕೆ ಕಂಡಿದ್ದು, ಪ್ರತಿದಿನ ಒಂದು ಕೋಟಿ ಲೀಟರ್ ಹಾಲನ್ನು ಕೆಎಂಎಫ್ ಸಂಗ್ರಹಿಸುತ್ತಿದೆ. ಪ್ರೋತ್ಸಾಹಧನ ಹೆಚ್ಚಳದಿಂದ ಹಾಲಿನ ಉತ್ಪಾದನೆ ಮತ್ತಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ.
ರಾಜ್ಯದಲ್ಲಿ ಸದ್ಯ 16 ಹಾಲು ಒಕ್ಕೂಟಗಳ ವ್ಯಾಪ್ತಿಯ 9 ಲಕ್ಷ ರೈತರು ಹಾಲು ಪ್ರೋತ್ಸಾಹಧನ ಪಡೆಯುತ್ತಿದ್ದಾರೆ. ಪ್ರತಿ ವರ್ಷ 1,900 ಕೋಟಿ ರೂ. ರೈತರ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತಿದೆ. ಪ್ರತಿ ಲೀಟರ್ ಗೆ ಎರಡು ರೂಪಾಯಿ ಏರಿಕೆಯಾದರೆ ವಾರ್ಷಿಕ 730 ಕೋಟಿ ರೂ. ಹೆಚ್ಚಿನ ಮೊತ್ತ ಭರಿಸಬೇಕಿದೆ. ರೈತರಿಗೆ ಪ್ರತಿ ಲೀಟರ್ ಗೆ 38 ರೂಪಾಯಿವರೆಗೂ ದರ ಸಿಗುತ್ತಿದೆ. ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪ್ರೋತ್ಸಾಹಧನ ಏರಿಕೆ ಪ್ರಸ್ತಾವ ಸಲ್ಲಿಸಲಾಗಿದ್ದು ಇದಕ್ಕೆ ಸ್ಪಂದನೆ ಸಿಕ್ಕಿದೆ ಎಂದು ಹೇಳಲಾಗಿದೆ.

