ಬೆಂಗಳೂರು: ಕಾಡಂಚಿನ ಜಮೀನುಗಳಲ್ಲಿ ವನ್ಯಜೀವಿಗಳ ಸಂಚಾರದ ಬಗ್ಗೆ ಕಮಾಂಡ್ ಕೇಂದ್ರಕ್ಕೆ ಮಾಹಿತಿ ಬಂದ ತಕ್ಷಣ ತೋಟದ ಬೆಳೆಗಾರರ ಸಂಘಟನೆ ಮತ್ತು ಕಾರ್ಮಿಕ ಸಂಘಟನೆ, ಸ್ಥಳೀಯ ಮುಖಂಡರಿಗೆ ಮಾಹಿತಿ ರವಾನಿಸಲು ಕ್ರಮ ವಹಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಚಿಕ್ಕಮಗಳೂರು ತಾಲೂಕು ಹುಣಸೆಹಳ್ಳಿ ಬಳಿಯ ತೋಟದಲ್ಲಿ ಒಂದು ವಾರದಲ್ಲಿ ಕಾಡಾನೆ ದಾಳಿಗೆ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಉನ್ನತಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿದ ಸಚಿವರು, ವನ್ಯಜೀವಿ-ಮಾನವ ಸಂಘರ್ಷ ಇರುವ ಪ್ರದೇಶಗಳ ಸ್ಥಳೀಯ ಮುಖಂಡರ, ಗ್ರಾಮಗಳ ಜಮೀನು ಮಾಲೀಕರ ವಾಟ್ಸ್ ಅಪ್ ಗ್ರೂಪ್ ಮಾಡಿ ಮಾಹಿತಿ ಪ್ರಸಾರ ಮಾಡುವಂತೆ ಸೂಚಿಸಿದರು.
ಮಾನವ ಜೀವ ಅತ್ಯಮೂಲ್ಯವಾದದ್ದು, ಜೀವಹಾನಿ ಘಟನೆ ಅತ್ಯಂತ ನೋವಿನ ಸಂಗತಿ. ಅಧಿಕಾರಿಗಳು ಮತ್ತು ಸಿಬ್ಬಂದಿ ಇಂತಹ ಘಟನೆ ಮರುಕಳಿಸದಂತೆ 24×7 ನಿಗಾ ಇಡಬೇಕು. ಕಡ್ಡಾಯವಾಗಿ ಸೆಕ್ಷನ್ 144 ಜಾರಿ ಮಾಡಿ ವನ್ಯಜೀವಿ ಸೆರೆ ಕಾರ್ಯಾಚರಣೆ ನಡೆಸಬೇಕು ಎಂದು ಹೇಳಿದರು.
ವನ್ಯಜೀವಿಗಳ ಸೆರೆ ಕಾರ್ಯಾಚರಣೆಗೆ ಅತ್ಯಾಧುನಿಕ ಸಲಕರಣೆಗಳಾದ ಥರ್ಮಲ್ ಡ್ರೋನ್ ಬಳಕೆ ಮಾಡಬೇಕು ಎಂದು ಸೂಚಿಸಿದರು.
ಅರಣ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದ ಬಳಿಕವೂ ತೋಟದ ಮಾಲೀಕರು ಕಾರ್ಮಿಕರನ್ನು ತೋಟಕ್ಕೆ ಕಳಿಸಿದರೆ ಅಂತಹ ಮಾಲೀಕರಿಗೆ ಎಚ್ಚರಿಕೆ ನೀಡಿ, ತೋಟದ ಮಾಲೀಕರಿಗೂ ಜವಾಬ್ದಾರಿ ಇರಬೇಕು. ನಿರ್ಲಕ್ಷ್ಯ ತೋರಿದರೆ ದೂರು ದಾಖಲಿಸಿ ಎಂದು ಸಚಿವ ಸೂಚಿಸಿದರು.
ಮಾಹಿತಿಯ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರಣ್ಯದ ಹೊರಗೆ 35 ಆನೆಗಳು 3 ಗುಂಪಿನಲ್ಲಿ ಸಂಚರಿಸುತ್ತಿದ್ದು, ಬೇಸಿಗೆಯಲ್ಲಿ ಅವುಗಳು ಕಾಡಿನಿಂದ ಹೊರಬರುವುದು ಸಾಮಾನ್ಯ. ಆದಾಗ್ಯೂ ಸಿಬ್ಬಂದಿ ಮತ್ತು ಅಧಿಕಾರಿಗಳು ವನ್ಯಜೀವಿ-ಮಾನವ ಸಂಘರ್ಷ ಆಗದಂತೆ ನಿಗಾ ವಹಿಸಬೇಕು. ಪ್ರತಿ ವರ್ಷ ವನ್ಯಜೀವಿ-ಮಾನವ ದಾಳಿಯಲ್ಲಿ ಆಗುತ್ತಿರುವ ಸಾವಿನ ಸಂಖ್ಯೆ ಇಳಿಕೆಯಾಗಬೇಕೇ ಹೊರತು, ಹೆಚ್ಚಳ ಆಗಬಾರದು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ತಿಳಿಸುದರು.

