ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಖಂಡಿಸಿ ಫೆಬ್ರವರಿ 26ರಂದು ‘ಬಾಗಲಕೋಟೆ ಚಲೋ’ ಬೃಹತ್ ಪ್ರತಿಭಟನೆಗೆ ಹಿಂದೂ ಮುಖಂಡರು ಕರೆ ನೀಡಿದ್ದಾರೆ. ಆದರೆ ಈಗ ಅದಕ್ಕೆ ಅವಕಾಶವಿಲ್ಲ.
ಬಾಗಲಕೋಟೆ ನಗರದಲ್ಲಿ ಪ್ರತಿಬಂಧಕಾಜ್ಞೆ ಕಲಂ 163 ಬಿಎನ್ಎಸ್ಎಸ್ 2023 ಜಾರಿಯಲ್ಲಿ ಇರುವುದರಿಂದ, ಯಾವುದೇ ಪ್ರತಿಭಟನೆಗೆ ಅವಕಾಶವಿರುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮಾರ್ಚ್ 1, 2026ರ ತನಕ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಸಿದ್ಧಾರ್ಥ ಗೋಯಲ್, ಪೊಲೀಸ್ ಅಧೀಕ್ಷಕರು, ಬಾಗಲಕೋಟೆ ಜಿಲ್ಲೆ ಆದೇಶವನ್ನು ಹೊರಡಿಸಿದ್ದಾರೆ. ವಿವರಗಳು ಹೀಗಿವೆ…
ದಿನಾಂಕ 19.02.2026 ರಂದು ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತಿ ನಿಮಿತ್ತ ನಡೆದ ಮೆರವಣಿಗೆ ಸಂದರ್ಭದಲ್ಲಿ ಆದ ಘಟನೆಗೆ ಸಂಬಂಧಿಸಿದಂತೆ 3 ಪ್ರಕರಣಗಳು ದಾಖಲಾಗಿದ್ದು, ಸದರಿ ಪ್ರಕರಣಗಳಲ್ಲಿ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿದ್ದು ಇರುತ್ತದೆ.
ಕಳೆದ 3 ದಿನಗಳಿಂದ ನಗರದಲ್ಲಿ ಪರಿಸ್ಥಿತಿಯು ತಿಳಿಯಾಗುತ್ತಿದ್ದು, ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಆದರೆ ಕೆಲವು ಸಾಮಾಜಿಕ ಜಾಲತಾಣಗಳ ಮುಖಾಂತರ ಕೆಲವು ಸಂಘಟನೆಯವರು ಬಾಗಲಕೋಟೆ ಶಹರದಲ್ಲಿ ದಿನಾಂಕ 26.02.2026 ರಂದು ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ತಿಳಿದು ಬಂದಿರುತ್ತದೆ.
ಪ್ರತಿಭಟನಾ ಮೆರವಣಿಗೆಯಿಂದ ಅಶಾಂತಿ ಉಂಟಾದಲ್ಲಿ ಬಡಜನರ, ಕೂಲಿ ಕಾರ್ಮಿಕರ ಹಾಗೂ ವ್ಯಾಪಾರಸ್ಥರ ಆರ್ಥಿಕ ಸ್ಥಿತಿಗೆ ಭಾರಿ ಪೆಟ್ಟು ಬೀಳುತ್ತದೆ. ಬಾಗಲಕೋಟೆ ನಗರದಲ್ಲಿ ಶಾಂತತೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿರುತ್ತದೆ.
ಅಲ್ಲದೆ ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಅಂತಿಮ ಪರೀಕ್ಷೆಗಳು ನಡೆಯುತ್ತಿದ್ದು, ಈಗಾಗಲೇ ಬಾಗಲಕೋಟೆ ನಗರದಲ್ಲಿ ಕಲಂ, 163 ಬಿಎನ್ಎಸ್ಎಸ್ 2023 (144 ಸಿಆರ್.ಪಿ.ಸಿ) ಪ್ರತಿಬಂಧಕಾಜ್ಞೆ ಜಾರಿಯಲ್ಲಿದೆ.
ದಿನಾಂಕ 01.03.2026 ರವರೆಗೆ ಪ್ರತಿಬಂಧಕಾಜ್ಞೆಯನ್ನು ಮುಂದುವರೆಸಲಾಗುವುದು. (ದಿನಾಂಕ 24.02.2026 ರಿಂದ ನವನಗರದಲ್ಲಿ ಪ್ರತಿಬಂಧಕಾಜ್ಞೆಯನ್ನು ಹಿಂಪಡೆಯಲಾಗುತ್ತಿದೆ) ಪ್ರತಿಭಟನಾ ಕರೆ ನೀಡಿದ ಸಂಘಟಕರು/ ಕಾರ್ಯಕರ್ತರು ಮಕ್ಕಳ ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ಮತ್ತು ಮುಂಬರುವ ಹೋಳಿ, ಯುಗಾದಿ ಹಾಗೂ ರಂಜಾನ್ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಪ್ರತಿಭಟನೆಗಳನ್ನು ಮಾಡದೇ ಸಂಘಟಕರು/ ಕಾರ್ಯಕರ್ತರು ಶಾಂತತೆಯನ್ನು ಕಾಪಾಡುವಂತೆ ಕೋರಲಾಗಿದೆ.
ಒಂದು ವೇಳೆ ಇದನ್ನು ಮೀರಿ ಯಾವುದೇ ಸಂಘಟನೆಗಳು ಬಂದ್ ಅಥವಾ ಪ್ರತಿಭಟನೆ ಕೈಗೊಂಡಲ್ಲಿ ಬಾಗಲಕೋಟೆ ನಗರದಲ್ಲಿ ಅಶಾಂತಿ ಸೃಷ್ಟಿಯಾದಲ್ಲಿ ಅದಕ್ಕೆ ಸಂಬಂಧಿಸಿದ ಸಂಘಟಕರನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಿ ಕಾನೂನು ರೀತ್ಯ ಕಠಿಣ ಕ್ರಮ ಕೈಗೊಳ್ಳಲಾಗುವುದು.

