ಬೆಂಗಳೂರು: ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ಮುಂದುವರೆದಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ರಾಮನಗರದಲ್ಲಿ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್ ಅನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ವೇಳೆ ಭಾರೀ ಪ್ರಮಾಣದ ಹೈಡ್ರೋಪೋನಿಕ್ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ಬ್ಯಾಂಕಾಕ್‌ನಿಂದ ಬಂದಿದ್ದ ಪ್ರಯಾಣಿಕನ ಲಗೇಜ್ ಪರಿಶೀಲನೆ ಮಾಡಿದಾಗ ಸುಮಾರು 8 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ 2.8 ಕೋಟಿ ರೂ. ಎಂದು ತಿಳಿದುಬಂದಿದೆ.
ಇನ್ನೊಂದು ಪ್ರಕರಣದಲ್ಲಿ ಹಾಂಕಾಂಗ್‌ನಿಂದ ಬಂದಿದ್ದ ಮತ್ತೊಬ್ಬ ಪ್ರಯಾಣಿಕನ ಬಳಿಯಿಂದ 900 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಇದರ ಮೌಲ್ಯ ಸುಮಾರು 31.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇಬ್ಬರೂ ಪ್ರಯಾಣಿಕರು ಗಾಂಜಾವನ್ನು ಲಗೇಜ್ ಬ್ಯಾಗ್‌ನಲ್ಲಿ ಅಡಗಿಸಿಟ್ಟುಕೊಂಡು ಬಂದಿದ್ದರು ಎನ್ನಲಾಗಿದೆ.
ತಕ್ಷಣ ಕಸ್ಟಮ್ಸ್ ಅಧಿಕಾರಿಗಳು ಇಬ್ಬರನ್ನೂ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಇದೇ ವೇಳೆ ರಾಮನಗರ ಜಿಲ್ಲೆಯ ಐಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಂದೂವರೆ ಕೋಟಿ ರೂ. ಮೌಲ್ಯದ 750 ಗ್ರಾಂ ಡ್ರಗ್ಸ್ ವಶಪಡಿಸಲಾಗಿದೆ. ದಾಳಿಯ ವೇಳೆ 450 ಎಂಡಿಎಂಎ ಮಾತ್ರೆಗಳು ಹಾಗೂ 550 ಗ್ರಾಂ ಕ್ರಿಸ್ಟಲ್ ಡ್ರಗ್ಸ್ ಸೀಜ್ ಮಾಡಲಾಗಿದೆ.
ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬೆಂಗಳೂರಿನ ಗೋರಿಪಾಳ್ಯದ ಸಜ್ಜಿಲ್ ಪಾಷಾ ಅಲಿಯಾಸ್ ಸಲ್ಮಾನ್, ಸಾದಿಕ್ ಹಾಗೂ ಉಗಾಂಡ ಮೂಲದ ನಾನಾ ಜಾನ್ಸನ್ ಎಂದು ಗುರುತಿಸಲಾಗಿದೆ. ಆರೋಪಿಗಳು ಬೆಂಗಳೂರಿನಿಂದ ಡ್ರಗ್ಸ್ ತಂದು ರಾಮನಗರದಲ್ಲಿ ಮಾರಾಟ ಮಾಡುತ್ತಿದ್ದರೆಂದು ತಿಳಿದುಬಂದಿದೆ.

