ಬೆಂಗಳೂರು : ಮ್ಯಾಟ್ರಿಮೋನಿ ಸೈಟ್ನಲ್ಲಿ ಪರಿಚಯವಾದ ಯುವತಿಯೊಬ್ಬಳು ಮದುವೆಯಾಗುವುದಾಗಿ ನಂಬಿಸಿ, ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿಸಿ ಯುವಕನಿಗೆ ಬರೋಬ್ಬರಿ 21.22 ಲಕ್ಷ ರೂ. ವಂಚಿಸಿದ್ದಾಳೆ. ಟಿ. ದಾಸರಹಳ್ಳಿಯ ರಾಕೇಶ್ಗೆ ‘ಕಮಿಷನ್’ ಹೆಸರಲ್ಲಿ ಮಕ್ಮಲ್ ಟೋಪಿ ಹಾಕಿದ ಕಿರಾತಕಿ ಈಗ ನಾಪತ್ತೆಯಾಗಿದ್ದಾಳೆ.
ಹೌದು. ಮದುವೆಯಾಗುವುದಾಗಿ ನಂಬಿಸಿ ಯುವಕನೊಬ್ಬನಿಗೆ ಬರೋಬ್ಬರಿ 21.22 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಟಿ. ದಾಸರಹಳ್ಳಿ ಮೂಲದ ರಾಕೇಶ್ ಎಂಬುವವರು ಈ ವಂಚನೆಗೆ ಬಲಿಯಾದ ದುರ್ದೈವಿ.
ಏನಿದು ಘಟನೆ
ಮ್ಯಾಟ್ರಿಮೋನಿ ಸೈಟ್ನಲ್ಲಿ ವಧು ಹುಡುಕುತ್ತಿದ್ದ ರಾಕೇಶ್ ಅವರಿಗೆ ಶಿರೀಷ ಎಂಬಾಕೆಯ ಪರಿಚಯವಾಗಿತ್ತು. ಇಬ್ಬರೂ ಫೋನ್ ಮೂಲಕ ಸ್ನೇಹ ಬೆಳೆಸಿದ್ದರು.ಸ್ನೇಹ ಬೆಳೆದಂತೆಲ್ಲಾ ಶಿರೀಷ ಮದುವೆಯಾಗುವ ಆಸೆ ತೋರಿಸಿದ್ದಾಳೆ. ಅದರ ಜೊತೆಗೆ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ನಂಬಿಸಿದ್ದಾಳೆ.
ಆಕೆ ನೀಡಿದ ವೆಬ್ಸೈಟ್ ಲಿಂಕ್ ಹಾಗೂ ಬ್ಯಾಂಕ್ ಖಾತೆಗಳಿಗೆ ರಾಕೇಶ್ ಹಂತಹಂತವಾಗಿ ಹಣ ಹೂಡಿಕೆ ಮಾಡಿದ್ದಾರೆ. ಆರಂಭದಲ್ಲಿ ಲಾಭ ಬರುತ್ತಿರುವಂತೆ ತೋರಿಸಿದ ಆಕೆ, ನಂತರ ಹಣ ಡ್ರಾ ಮಾಡಲು ‘ಕಮಿಷನ್’ ಪಾವತಿಸಬೇಕು ಎಂದು ಹೇಳಿ ಒಟ್ಟು 21.22 ಲಕ್ಷ ರೂಪಾಯಿ ಹಾಕಿಸಿಕೊಂಡಿದ್ದಾಳೆ.ಕೊನೆಗೆ ಹೂಡಿಕೆ ಮಾಡಿದ ಅಸಲು ಅಥವಾ ಲಾಭ ಯಾವುದೂ ಸಿಗದೆ, ಯುವತಿಯೂ ಸಂಪರ್ಕಕ್ಕೆ ಸಿಗದಿದ್ದಾಗ ತಾನು ಮೋಸ ಹೋಗಿರುವುದು ರಾಕೇಶ್ಗೆ ತಿಳಿದಿದೆ.
ಸದ್ಯ ಈ ಕುರಿತು ರಾಕೇಶ್ ಅವರು ಬೆಂಗಳೂರಿನ ಉತ್ತರ ವಿಭಾಗದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಎಚ್ಚರ : ಮ್ಯಾಟ್ರಿಮೋನಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದವರು ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದರೆ ಜಾಗರೂಕರಾಗಿರಿ. ಇದು ಡಿಜಿಟಲ್ ವಂಚನೆಯ ಹೊಸ ಹಾದಿಯಾಗಿದೆ.

