HomeLatest Newsಕಾರವಾರ ಸೇರಿ ಪ್ರತಿ ಜಿಲ್ಲೆಯಲ್ಲಿಯೂ ಬಡವರಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸಿಎಂ ಸಿದ್ಧರಾಮಯ್ಯ

ಕಾರವಾರ ಸೇರಿ ಪ್ರತಿ ಜಿಲ್ಲೆಯಲ್ಲಿಯೂ ಬಡವರಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸಿಎಂ ಸಿದ್ಧರಾಮಯ್ಯ

ಕಾರವಾರ: ಮುಂದಿನ ಆಯವ್ಯಯದಲ್ಲಿ ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.

ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ನಿರ್ಮಿಸಿರುವ “450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ, ಯಲ್ಲಾಪುರ ತಾಲ್ಲೂಕಿನ ಖಾನಾಪುರ ತಾಳಗುಪ್ಪ ರಾಜ್ಯ ಹೆದ್ದಾರಿ 93 ರಲ್ಲಿನ ನೂತನ ಸೇತುವೆ, ಯಲ್ಲಾಪುರ ಪಟ್ಟಣದ ನಿರೀಕ್ಷಣಾ ಮಂದಿರದ ಹೊಸ ಕಟ್ಟಡ ಹಾಗೂ ಮುಂಡಗೋಡ ತಾಲ್ಲೂಕಿನ ಹೊಸ ಪ್ರವಾಸಿ ಮಂದಿರದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸುವ ಉದ್ದೇಶದಿಂದ 2016 ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಲಾಗಿದ್ದು, ಇಂದು 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಮೊದಲು ಇಲ್ಲಿನ ಜನರು ಉನ್ನತ ಮಟ್ಟದ ಚಿಕಿತ್ಸೆಗಾಗಿ ಉಡುಪಿ, ಮಂಗಳೂರು, ಹುಬ್ಬಳ್ಳಿಗೆ ಹೋಗುತ್ತಿದ್ದರು. ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮುಂದಿನ ಆಯವ್ಯಯದಲ್ಲಿ ಮಂಜೂರು ಮಾಡಿಕೊಡುತ್ತೇನೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತಿ ಜಿಲ್ಲೆಯಲ್ಲಿಯೂ ಬಡವರಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಕ್ಯಾನ್ಸರ್ ಯೂನಿಟ್ ಒಂದನ್ನು ಕಾರವಾರದಲ್ಲಿ ಸ್ಥಾಪಿಸಲಾಗುವುದು. ಜಿಲ್ಲಾ ಕೇಂದ್ರಗಳಲ್ಲಿ ಎಲ್ಲಾ ವೈದ್ಯಕೀಯ ವ್ಯವಸ್ಥೆಗಳನ್ನು ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಕರ್ನಾಟಕದಲ್ಲಿ ಈಗಾಗಲೇ 22 ಸರ್ಕಾರಿ ಮೆಡಿಕಲ್ ಕಾಲೇಜಿದ್ದು, ಮುಂದಿನ ದಿನಗಳಲ್ಲಿ ಕೋಲಾರ, ಪುತ್ತೂರು, ಬಿಜಾಪುರಗಳಲ್ಲಿ ಕಾಲೇಜು ನಿರ್ಮಿಸಲಾಗುವುದು ಎಂದರು.

ಗ್ಯಾರಂಟಿಗಳಿಂದ ಸರ್ಕಾರದ ಬಳಿ ಹಣವಿಲ್ಲ ಎಂದು ವಿರೋಧ ಪಕ್ಷದವರು ಟೀಕಿಸುತ್ತಿದ್ದಾರೆ. ಆದರೆ ನಮ್ಮ ಅಭಿವೃದ್ಧಿಯ ಪಯಣ ನಿರಂತರವಾಗಿ ಸಾಗಿದೆ. ಉತ್ತರ ಕನ್ನಡ ಜಿಲ್ಲೆಗೆ 2,954 ಕೋಟಿ ರೂ.ಗಳನ್ನು ಇಲ್ಲಿವರೆಗೆ ಗ್ಯಾರಂಟಿ ಯೋಜನೆಗಳಿಗೆ ವ್ಯಯಿಸಲಾಗಿದೆ. ರಾಜ್ಯದಲ್ಲಿ ಸುಮಾರು 1,18,000 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಲಾಗಿದೆ. ಬಿಜೆಪಿಯವರು ನಮ್ಮ ಜನಪರ ಯೋಜನೆಗಳನ್ನು ಟೀಕಿಸುತ್ತಾ, ಅಭಿವೃದ್ಧಿಯಾಗುತ್ತಿಲ್ಲವೆಂದು ದೂರುತ್ತಿದ್ದಾರೆ. ಬಿಜೆಪಿಯವರು ತಮ್ಮ ಅವಧಿಯಲ್ಲಿ ಇಲ್ಲಿನ ಸೇತುವೆ ಯೋಜನೆಗಳನ್ನು ಪೂರ್ಣಗೊಳಿಸಲಿಲ್ಲ. ನಮ್ಮ ಸರ್ಕಾರ ಉಳುಗಾ ಕೆರವಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಯೋಜನೆಯನ್ನು ಆದ್ಯತೆ ಮೇಲೆ ಪೂರ್ಣಗೊಳಿಸುತ್ತದೆ ಎಂದರು.

ಗ್ಯಾರಂಟಿ ಯೋಜನೆಗಳ ಜೊತೆಗೆ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ಕೊಟ್ಟು, ಕರ್ನಾಟಕವನ್ನು ಪ್ರಗತಿಯ ಹೊಸದಿಕ್ಕಿನಲ್ಲಿ ಮುನ್ನಡೆಸುತ್ತಿದ್ದೇವೆ ಎಂಬುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಶರಣಪ್ರಕಾಶ್ ಪಾಟೀಲ್,  ಮಂಕಾಳ ವೈದ್ಯ, ಮಾಜಿ ಸಚಿವರೂ, ಶಾಸಕರು ಆದ ಆರ್.ವಿ.ದೇಶಪಾಂಡೆ, ಶಾಸಕರಾದ ಶಿವರಾಮ್ ಹೆಬ್ಬಾರ್, ಸತೀಶ್ ಸೈಲ್, ಭೀಮಣ್ಣ ನಾಯ್ಕ ಸೇರಿ ಹಲವು ಪ್ರಮುಖರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular