ಕಾರವಾರ: ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಸ್ತಾಂತರ ಚರ್ಚೆ ನಡುವೆಯೇ ಕಾಂಗ್ರೆಸ್ ನ ಕೆಲ ಶಾಸಕರು ವಿದೇಶ ಪ್ರವಾಸಕ್ಕೆ ತೆರಳಿದ್ದು, ಇದು ಕಾಂಗ್ರೆಸ್ ಪಾಳಯದಲ್ಲಿಯೇ ಅಸಮಾಧಾನಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ಶಾಸಕರು ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಡಿಸಿಎಂ ಡಿ.ಕೆ.ಶಿವಕುಮಾರ್ ಬಣದ ಶಾಸಕರ ಅಸಮಾಧಾನ, ಆಕ್ಷೇಪಕ್ಕೆ ಕಾರಣವಾಗಿದ್ದು, ಕೆಲ ನಾಯಕರು ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ.
ಶಾಸಕ ರವಿ ಗಾಣಿಗ, ಬಸವರಾಜ್ ಶಿವಗಂಗಾ, ಇಕ್ಬಾಲ್ ಹುಸೇನ್ ಮೊದಲಾದವರು ವಿದೇಶ ಪ್ರವಾಸಕ್ಕೆ ತೆರಳಿರುವ ಸ್ವಪಕ್ಷದ ಶಾಸಕರ ವಿರುದ್ಧವೇ ಆಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಮುಜುಗರವನ್ನುಂಟುಮಾಡುತ್ತಿದೆ. ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತೆ ಮತ್ತೆ ಕೈ ಶಾಸಕರೇ ತೋರ್ಪಡಿಸುತ್ತಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ.ಶಿವಕುಮಾರ್ ಗರಂ ಆಗಿದ್ದಾರೆ.
ಕಾಂಗ್ರೆಸ್ ನ ಕೆಲ ಶಾಸಕರ ವಿದೇಶ ಪ್ರವಾಸ ಹಾಗೂ ಸ್ವಪಕ್ಷದ ಕೆಲ ಶಾಸಕರಿಂದ ಆಕ್ಷೇಪ ವ್ಯಕ್ತವಾಗುತ್ತಿರುವ ವಿಚಾರವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಶಾಸಕರು ಬಾಯಿಮುಚ್ಚಿಕೊಂಡು ಇರ್ಬೇಕು ಎಂದು ಮತ್ತೊಮ್ಮೆ ತಾಕೀತು ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ರವಿ ಗಾಣಿಗ, ಶಿವಗಂಗಾ, ಇಕ್ಬಾಲ್ ಹುಸೇನ್ ಎಲ್ಲರೂ ಬಾಯಿ ಮುಚ್ಚಿಕೊಂಡು ಇರ್ಬೇಕು. ಅವರು ಸುಮ್ಮನಿದ್ದರೆ ನನಗೆ ಒಳ್ಳೆಯದಾಗುತ್ತದೆ ಎಂದ್ದಾರೆ.
ವಿದೇಶಕ್ಕೆ ಹೋಗಿರುವವರೆಲ್ಲರೂ ನಮ್ಮವರೇ. ಏನಕ್ಕೆ ಹೋಗಿದ್ದಾರೋ, ಬಂದ್ಮೇಲೆ ಮಾತನಾಡುತ್ತೇನೆ. ನಮ್ಮಲ್ಲಿ ಯಾವುದೇ ಗೊಂದಲಗಳೂ ಇಲ್ಲ ಅಸಮಾಧಾನವೂ ಇಲ್ಲ. ಕೆಲವರು ಬಾಯಿಮುಚ್ಚಿಕೊಂಡಿದ್ದರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದಿದ್ದಾರೆ.

