ಬೆಂಗಳೂರು: ಗದಗ ಜಿಲ್ಲೆ ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಡಾ. ಚಂದ್ರು ಲಮಾಣಿ ಅವರಿಗೆ ಸೇರಿದ ಖಾಸಗಿ ಆಸ್ಪತ್ರೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಕಮಿಷನ್ ಪಡೆಯುತ್ತಿದ್ದ ಚಂದ್ರು ಲಮಾಣಿ ಮತ್ತು ಅವರ ಸರ್ಕಾರಿ ಆಪ್ತ ಕಾರ್ಯದರ್ಶಿ ಮಂಜುನಾಥ ತಳವಾರ, ಖಾಸಗಿ ಆಪ್ತ ಕಾರ್ಯದರ್ಶಿ ಗುರು ಲಮಾಣಿ ಅವರನ್ನು ಬಂಧಿಸಿದ್ದರು.
ಗುತ್ತಿಗೆದಾರ ವಿಜಯರಾಜ್ ಪೂಜಾರ್ ನೀಡಿದ ದೂರಿನ ಅನ್ವಯ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಒಂದು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಚಂದ್ರು ಲಮಾಣಿ 11 ಲಕ್ಷ ರೂಪಾಯಿ ಕಮಿಷನ್ ಕೇಳಿದ್ದಾರೆ ಎಂದು ಲೋಕಾಯುಕ್ತರಿಗೆ ಪೂಜಾರ್ ದೂರು ನೀಡಿದ್ದರು.
ಶನಿವಾರ ಮುಂಗಡವಾಗಿ 5 ಲಕ್ಷ ರೂಪಾಯಿ ಹಣ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದರು. ಇಂದು ಬೆಂಗಳೂರಿನಲ್ಲಿ ನ್ಯಾಯಾಧೀಶರ ಮುಂದೆ ಚಂದ್ರು ಲಮಾಣಿ ಅವರನ್ನು ಹಾಜರುಪಡಿಸಲಾಗಿದ್ದು, ಮಾರ್ಚ್ 3ರವರೆಗೆ ಚಂದ್ರು ಲಮಾಣಿ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಲೋಕಾಯುಕ್ತ ಪೊಲೀಸರು ಯಲಹಂಕದ ಜ್ಯುಡಿಷಿಯಲ್ ಲೇಔಟ್ ನಲ್ಲಿರುವ ನ್ಯಾಯಾಧೀಶರ ನಿವಾಸದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಮಾರ್ಚ್ 3ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಚಂದ್ರು ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿದೆ.

