ಧಾರವಾಡ: ಕುಂದಗೋಳ ಭೂ ಮಾಪನ ಇಲಾಖೆ ಸರ್ವೆಯರ್ ರಾಘವೇಂದ್ರ ಶಂಕರರಾವ ಕುಲಕರ್ಣಿ ಅವರಿಗೆ ಲಂಚ ಪ್ರಕರಣದಲ್ಲಿ 4 ವರ್ಷ ಜೈಲು ಶಿಕ್ಷೆ ಮತ್ತು 20,000 ರೂ. ದಂಡ ವಿಧಿಸಿ ಧಾರವಾಡದ 3 ನೇ ಅಧಿಕ ಜಿಲ್ಲಾ ಸತ್ರ ಹಾಗೂ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಧಾರವಾಡ ಲೋಕಾಯುಕ್ತ ಪೊಲೀಸ ಠಾಣೆ ಪ್ರಕರಣ ಸಂಖ್ಯೆ: 08/2019 ಕಲಂ. 07 ಲಂಚ ಪ್ರತಿಬಂಧಕ ಕಾಯ್ದೆ-1988ರ ಆರೋಪಿ ರಾಘವೇಂದ್ರ ಶಂಕರರಾವ ಕುಲಕರ್ಣಿ, ಉದ್ಯೋಗ ಸರ್ವೆಯರ್, ಭೂ ಮಾಪನ ಇಲಾಖೆ ಕುಂದಗೋಳ ಇವರಿಗೆ 3 ನೇ ಅಧಿಕ ಜಿಲ್ಲಾ ಸತ್ರ ಹಾಗೂ ವಿಶೇಷ ನ್ಯಾಯಾಲಯ, ಧಾರವಾಡದಲ್ಲಿ ದೋಷಿಯೆಂದು ತೀರ್ಮಾನಿಸಿ ಇಂದು ತೀರ್ಪು ನೀಡಲಾಗಿದೆ.
ಈ ಪ್ರಕರಣದಲ್ಲಿಯ ಫಿರ್ಯಾದಿದಾರ ಮಲ್ಲಿಕಾರ್ಜುನಗೌಡ ಭರಮಗೌಡ ಪಾಟೀಲ, ಸಾ: ಶಿರೂರ, ತಾ: ಕುಂದಗೋಳ ಇವರು ತಮ್ಮ ಕುಟುಂಬಕ್ಕೆ ಸಂಬಂಧಿಸಿದಂತೆ ಕುಂದಗೋಳ ತಾಲೂಕಿನ ಶಿರೂರ ಗ್ರಾಮದಲ್ಲಿರುವ ಸರ್ವೆ ನಂ 83/1, 83/1ಅ, 83/1ಬ ನೇದ್ದರಲ್ಲಿ ಒಟ್ಟು 9 ಎಕರೆ 8 ಗುಂಟೆ ಜಮೀನು ಇದ್ದು, ಈ ಜಮೀನುಗಳಲ್ಲಿ, 3 ಎಕರೆ 30 ಗುಂಟೆ, 3 ಎಕರೆ 30 ಗುಂಟೆ ಹಾಗೂ 1 ಎಕರೆ 28 ಗುಂಟೆ ಈ ಪ್ರಕಾರ ಉತಾರಗಳು ಜಂಟಿ ಹೆಸರಿನಲ್ಲಿದ್ದು, ಆ ಜಮೀನುಗಳು ಮೋಜಣಿ ಕಛೇರಿಯಲ್ಲಿ ಅಖಂಡ ಇದ್ದು, ಅದನ್ನು ಉತಾರಗಳ ಪ್ರಕಾರ ಅಳತೆ ಮಾಡಿ, ಪೋಡಿ ಮಾಡಿ ಕೊಡಲು ಅರ್ಜಿ ಸಲ್ಲಿಸಿದ್ದು, ಕೆಲಸ ಮಾಡಿಕೊಡಲು ಆಪಾದಿತನು 15,000 ರೂ.ಗಳ ಲಂಚದ ಹಣದ ಬೇಡಿಕೆ ಇಟ್ಟಿದರಿಂದಾಗಿ, ಆರೋಪಿ ರಾಘವೇಂದ್ರ ಶಂಕರರಾವ ಕುಲಕರ್ಣಿ, ಸರ್ವೆಯರ್, ಭೂ ಮಾಪನ ಇಲಾಖೆ ಕುಂದಗೋಳರವರ ವಿರುದ್ಧ ಧಾರವಾಡ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಅದರಂತೆ ದಿನಾಂಕ: 03-06-2019 ರಂದು 16 ಗಂಟೆಗೆ ಕುಂದಗೋಳ ಕೆ.ಎಸ್.ಆರ್.ಟಿ.ಸಿ ಕ್ಯಾಂಟಿನ್‍ನಲ್ಲಿ ಆರೋಪಿತನು ಫಿರ್ಯಾದಿದಾರರಿಂದ ಲಂಚದ ಹಣ ರೂ. 15,000 ಗಳನ್ನು ಪಡೆದುಕೊಳ್ಳುವಾಗ ಯಶಸ್ವಿಯಾಗಿ ಟ್ರ್ಯಾಪ್ ಮಾಡಲಾಗಿತ್ತು. ಆರೋಪಿತರ ಮೇಲೆ ಅಂದಿನ ತನಿಖಾಧಿಕಾರಿ ಬಿ.ಎ. ಜಾಧವ ಪೊಲೀಸ್ ಇನ್ಸಪೆಕ್ಟರ್ ರವರು ಪ್ರಕರಣದ ತನಿಖೆ ನಡೆಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ಧಾರವಾಡದ 3ನೇ ಅಧಿಕ ಜಿಲ್ಲಾ ಸತ್ರ ಹಾಗೂ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಾಧೀಶರಾದ ಜರೀನಾ ಅವರು ಇಂದು ನ್ಯಾಯಾಲಯದಲ್ಲಿ ಆಪಾದಿತ ಅಧಿಕಾರಿ ರಾಘವೇಂದ್ರ ಶಂಕರರಾವ ಕುಲಕರ್ಣಿ, ಸರ್ವೆಯರ್, ಭೂ ಮಾಪನ ಇಲಾಖೆ ಕುಂದಗೋಳ ರವರಿಗೆ 04 ವರ್ಷಗಳ ಕಾರಾವಾಸ ಶಿಕ್ಷೆ ಹಾಗೂ ರೂ. 20,000 ದಂಡ ವಿಧಿಸಿ ಆದೇಶಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಸ್.ಎಸ್. ಶಿವಳ್ಳಿ ವಾದ ಮಂಡಿಸಿದ್ದರು ಎಂದು ಕರ್ನಾಟಕ ಲೋಕಾಯುಕ್ತ ಧಾರವಾಡ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

