ಶಿವಮೊಗ್ಗ : ಪತಿ ಆತ್ಮಹತ್ಯೆ ಮಾಡಿಕೊಂಡ ವಾರದಲ್ಲೇ ಪತ್ನಿಯೂ ನೇಣಿಗೆ ಶರಣಾದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹೊಸ ಸಿದ್ದಾಪುರದಲ್ಲಿ ನಡೆದಿದೆ. ಪತಿ ಆತ್ಮಹತ್ಯೆ ಮಾಡಿಕೊಂಡ ಕೇವಲ ಒಂದು ವಾರದ ಅವಧಿಯಲ್ಲಿ ಪತ್ನಿಯೂ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಮಹಿಳೆಯನ್ನು ಗೋಣಿಬೀಡು ಗ್ರಾಮದ ಸ್ವಾತಿ.ಜೆ (36) ಎಂದು ಗುರುತಿಸಲಾಗಿದೆ. ಇವರ ಪತಿ ಜಗದೀಶ್ ಅವರು ಶಿವಮೊಗ್ಗದ KSISF ಘಟಕದಲ್ಲಿ ದಲಾಯತ್ ಆಗಿ ಕೆಲಸ ಮಾಡುತ್ತಿದ್ದರು ಜೀವನದಲ್ಲಿ ಜುಗುಪ್ಸೆ ಹೊಂದಿದ್ದ ಪತಿ ಜಗದೀಶ್ ಅವರು ಫೆಬ್ರವರಿ 14ರಂದು ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಪತ್ನಿಯ ಸಾವು: ಪತಿ ಅಗಲಿದ ನೋವಿನಲ್ಲಿದ್ದ ಸ್ವಾತಿ ಅವರು ಪತಿ ಮೃತಪಟ್ಟು ಒಂದು ವಾರ ಕಳೆಯುವುದರೊಳಗೆ ಫೆಬ್ರವರಿ 20ರಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಡೆತ್ ನೋಟ್ ಮತ್ತು ಆರೋಪ: ಸ್ವಾತಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಮ್ಮ ತಾಯಿಗೆ ಸಂದೇಶ ಕಳುಹಿಸಿದ್ದು, ಅದರಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.ಮೋಹನ್ ಎಂಬ ಪೊಲೀಸ್ ಸಿಬ್ಬಂದಿ ಫೇಸ್ಬುಕ್ನಲ್ಲಿ ತಮಗೆ ಸಂದೇಶ ಕಳುಹಿಸುತ್ತಿದ್ದರು. ಅವರನ್ನು ಬ್ಲಾಕ್ ಮಾಡಿದ್ದಕ್ಕೆ, ಆತ ತನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾನೆ ಎಂದು ಸ್ವಾತಿ ಆರೋಪಿಸಿದ್ದಾರೆ.”ಅವರನ್ನು ಸುಮ್ಮನೆ ಬಿಡಬೇಡಿ” ಎಂದು ಸ್ವಾತಿ ತಮ್ಮ ಸಾವಿಗೂ ಮುನ್ನ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಪೊಲೀಸ್ ಕ್ರಮ: ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಭದ್ರಾವತಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

