ವಂದೇ ಭಾರತ್ ಎಕ್ಸ್ಪ್ರೆಸ್ ಭಾರತದ ಐಷಾರಾಮಿ ರೈಲು ಸೇವೆ. ವಿವಿಧ ಮಾರ್ಗದಲ್ಲಿ ಈ ಮಾದರಿಯ ರೈಲುಗಳು ಸಂಚಾರವನ್ನು ನಡೆಸುತ್ತಿವೆ. ಇದರಲ್ಲಿ ಸಿಗುವ ಊಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಾಗುತ್ತದೆ.
ಈಗ ಬೆಂಗಳೂರು ಉತ್ತರ ಕ್ಷೇತ್ರದ ಸಂಸದೆ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಸಂಚಾರ ನಡೆಸಿ, ಅದರಲ್ಲಿ ಸಿಗುವ ಊಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ‘ಎರ್ನಾಕುಲಂನಿಂದ ತಿರುವನಂತಪುರಕ್ಕೆ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುವಾಗ ರುಚಿಕರವಾದ ಆಹಾರವನ್ನು ಸವಿದು ಆನಂದಿಸಿದೆ’ ಎಂದು ಹೇಳಿದ್ದಾರೆ.
‘ಎಲ್ಲಾ ಪ್ರಯಾಣಿಕರಿಗೆ ಪರಿಸರ ಸ್ನೇಹಿ ತೆಂಗಿನ ನಾರಿನ ಟ್ರೇಗಳಲ್ಲಿ ಊಟ ಬಡಿಸಿದ್ದು ನಿಜಕ್ಕೂ ವಿಶೇಷವಾಗಿತ್ತು. ಭಾರತೀಯ ರೈಲ್ವೆಯ ಈ ಚಿಂತನಶೀಲ ಉಪಕ್ರಮವು ಪ್ರಯಾಣದ ಅನುಭವವನ್ನು ಹೆಚ್ಚಿಸುವುದಲ್ಲದೆ, ತೆಂಗಿನ ನಾರಿನ ಉದ್ಯಮವನ್ನು ಉತ್ತೇಜಿಸುತ್ತದೆ ಮತ್ತು ನಮ್ಮ ಸ್ಥಳೀಯ ಕುಶಲಕರ್ಮಿಗಳಿಗೆ ಬೆಂಬಲ ನೀಡುತ್ತದೆ’ ಎಂದು ಸಚಿವರು ತಿಳಿಸಿದ್ದಾರೆ.
‘ಇದು ಸುಸ್ಥಿರತೆ ಮತ್ತು ಆತ್ಮನಿರ್ಭರತೆಯ ಕಡೆಗೆ ಇಟ್ಟಿರುವ ಶ್ಲಾಘನೀಯ ಹೆಜ್ಜೆ’ ಎಂದು ಸಚಿವರು ಬಣ್ಣಿಸಿದ್ದಾರೆ. ಸಚಿವರ ಈ ಪೋಸ್ಟ್ಗೆ ಹಲವಾರು ಪ್ರಯಾಣಿಕರು ಕಮೆಂಟ್ಗಳನ್ನು ಹಾಕಿದ್ದು, ವಂದೇ ಭಾರತ್ ರೈಲಿನ ಊಟ ಚೆನ್ನಾಗಿದೆ ಎಂದು ಅವರು ಸಹ ಮೆಚ್ಚುಗೆ ಸೂಚಿಸಿದ್ದಾರೆ.

