ಕರ್ನಾಟಕದ ಹಲವಾರು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಸ್ಕ್ಯಾನಿಂಗ್ ಸೇವೆ ಬಂದ್ ಮಾಡಲಾಗಿದೆ. ಇದಕ್ಕೆ ಕಾರಣ ಸರ್ಕಾರದಿಂದ ಸುಮಾರು 140 ಕೋಟಿ ರೂ. ಬಾಕಿ ಬರಬೇಕಿದೆ.
ಈ ವಿಚಾರದ ಕುರಿತು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ‘ಗ್ಯಾರಂಟಿಗಳ ಪ್ರಚಾರಕ್ಕೆ, ಯಾರೂ ಓದದ ಪತ್ರಿಕೆಗಳಿಗೆ ಕೋಟಿ ಕೋಟಿ ಸುರಿಯುವ ಈ ಕಾಂಗ್ರೆಸ್ ಸರ್ಕಾರಕ್ಕೆ, ಬಡವರ ಪ್ರಾಣ ಉಳಿಸುವ ಆರೋಗ್ಯ ಸೇವೆಗೆ ನೀಡಲು ಮಾತ್ರ ಹಣ ಇರುವುದಿಲ್ಲ’ ಎಂದು ಹೇಳಿದ್ದಾರೆ.
‘ಆಡಳಿತ ಹೇಗೆ ನಡೆಸಬಾರದು? ಎನ್ನುವುದಕ್ಕೆ ಈ ಭ್ರಷ್ಟ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮೇಲ್ಪಂಕ್ತಿ ಹಾಕಿಕೊಡುತ್ತಿದೆ. ಶೂನ್ಯ ಅಭಿವೃದ್ಧಿಯ ಈ ಕಾಂಗ್ರೆಸ್ ಸರ್ಕಾರ, ರಾಜ್ಯದ ಆರೋಗ್ಯ ಸೇವಾ ವಲಯವನ್ನು ಸಂಪೂರ್ಣವಾಗಿ ಹಾಳು ಮಾಡಿದೆ. ಉತ್ತಮವಾಗಿ ನಡೆಯುತ್ತಿದ್ದ ಜನೌಷಧಿ ಕೇಂದ್ರಗಳನ್ನು ಮುಚ್ಚಲು ಪ್ರಯತ್ನಿಸಿತು’ ಎಂದು ಆರೋಪಿಸಿದ್ದಾರೆ.
‘ಸರ್ಕಾರದ ಕೆಟ್ಟ ನಿರ್ವಹಣೆಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ಗಂಭೀರ ಕೊರತೆ ಎದುರಾಗಿದೆ. ಜನರಿಗೆ ಇಷ್ಟು ಸಂಕಷ್ಟ ಸಾಲದು ಎಂಬಂತೆ, ಈಗ ಬಡ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದ ಉಚಿತ ಸ್ಕ್ಯಾನಿಂಗ್ ಸೇವೆ ಕೂಡ ಈ ಕೆಟ್ಟ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಸ್ಥಗಿತಗೊಂಡಿರುವುದು ಅತ್ಯಂತ ದುರದೃಷ್ಟಕರ’ ಎಂದು ತಿಳಿಸಿದ್ದಾರೆ.
‘140 ಕೋಟಿ ರೂ. ಬಾಕಿ ಹಣವನ್ನು ಪಾವತಿಸದೆ, ಬಡಜನರ ಆರೋಗ್ಯದ ಜೊತೆ ಈ ಕಾಂಗ್ರೆಸ್ ಸರ್ಕಾರ ಚೆಲ್ಲಾಟವಾಡುತ್ತಿದೆ. ಜಿಲ್ಲಾಸ್ಪತ್ರೆಗಳಿಗೆ ಬರುವ ಬಡವರು ಸ್ಕ್ಯಾನಿಂಗ್‌ಗಾಗಿ ಖಾಸಗಿ ಕೇಂದ್ರಗಳಿಗೆ ಅಲೆದಾಡುವಂತಾಗಿದ್ದು, ಕಾಂಗ್ರೆಸ್ ಸರ್ಕಾರದ ಈ ಆಡಳಿತಾತ್ಮಕ ವೈಫಲ್ಯಕ್ಕೆ ಜನಸಾಮಾನ್ಯರು ಬೆಲೆ ತೆರುವಂತಾಗಿದೆ’ ಎಂದು ಪೋಸ್ಟ್ ಹಾಕಿದ್ದಾರೆ.
‘ಪರಿಸ್ಥಿತಿಯ ಗಂಭೀರತೆ ಅರ್ಥಮಾಡಿಕೊಂಡು ಜನರ ನೆರವಿಗೆ ಧಾವಿಸಬೇಕಾದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ರಾಜಕೀಯ ಹೇಳಿಕೆ ನೀಡುತ್ತಾ ಕಾಲ ಕಳೆಯುತ್ತಿದ್ದಾರೆ’ ಎಂದು ದೂರಿದ್ದಾರೆ.
‘ತನ್ನ ಅಮಾನವೀಯ ಧೋರಣೆಗಳನ್ನು ಕೈಬಿಟ್ಟು, ಜನರಿಗೆ ತೊಂದರೆ ಆಗದಂತೆ ರಾಜ್ಯ ಸರ್ಕಾರ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಬೇಕು. ಕೂಡಲೇ ಅಗತ್ಯ ನಿರ್ಧಾರಗಳನ್ನು ತೆಗೆದುಕೊಂಡು, ಸ್ಥಗಿತಗೊಂಡಿರುವ CT ಸ್ಕ್ಯಾನಿಂಗ್ ಹಾಗೂ MRI ಸೇವೆಗಳು ಬಡಜನರಿಗೆ ಲಭ್ಯವಾಗುವಂತೆ ಖಚಿತಪಡಿಸಿಕೊಳ್ಳಬೇಕು ಎಂದು ಆಗ್ರಹಿಸುತ್ತೇನೆ’ ಎಂದು ವಿಜಯೇಂದ್ರ ತಿಳಿಸಿದ್ದಾರೆ.

