ಬೆಂಗಳೂರು ಪೂರ್ವ ನಗರ ಪಾಲಿಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಂಟಿ ಆಯುಕ್ತರ ಕಾರ್ಯಾಲಯ ಪ್ರಕಟಣೆಯೊಂದನ್ನು ಹೊರಡಿಸಿದೆ. ಫೆಬ್ರವರಿ 21ರಂದು ಆಸ್ತಿಗಳ ಹರಾಜು ಮಾಡಲಾಗುತ್ತಿದೆ ಎಂದು ಹೇಳಿದೆ.
ಬೆಂಗಳೂರು ಪೂರ್ವನಗರ ಪಾಲಿಕೆ ಕೆ.ಆರ್.ಪುರ ವಲಯ-2. ಸರ್ಕಾರದ ಆದೇಶದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನಾಗಿ ರಚಿಸಿ, ಸದರಿ ಪ್ರಾಧಿಕಾರದ ಅಡಿಯಲ್ಲಿ 5 ಪ್ರತ್ಯೇಕ ಬೆಂಗಳೂರು ನಗರ ಪಾಲಿಕೆಗಳನ್ನಾಗಿ ರಚಿಸಲಾಗಿರುತ್ತದೆ.
ಬೆಂಗಳೂರು ಪೂರ್ವನಗರ ಪಾಲಿಕೆ ಕೆ.ಆರ್.ಪುರ ವಲಯ-2 ವ್ಯಾಪ್ತಿಯಲ್ಲಿ ಬರುವ ಸ್ವತ್ತುಗಳಿಂದ ಸ್ವೀಕರಿಸಲಾಗುವ ಆಸ್ತಿ ತೆರಿಗೆಯನ್ನು ಪಾಲಿಕೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲು, ನಿರ್ವಹಿಸಲು ಉಪಯೋಗಿಸಲಾಗುತ್ತದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2025ರ ಅಡಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಸ್ವತ್ತುಗಳ ಮಾಲೀಕರು ಪ್ರತಿಯೊಂದು ಆರ್ಥಿಕ ಸಾಲಿನಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಬೇಕಾಗಿರುತ್ತದೆ. ಆಸ್ತಿ ತೆರಿಗೆ ಪಾವತಿಸದ ಪ್ರಕರಣಗಳಲ್ಲಿ ಆಸ್ತಿ ತೆರಿಗೆ ವಸೂಲಿ ಮಾಡುವ ಕಾರ್ಯ ವಿಧಾನವನ್ನು ಆಸ್ತಿ ತೆರಿಗೆ ನಿರ್ಧರಣೆ ವಸೂಲಾತಿ ಮತ್ತು ನಿರ್ವಹಣೆ ನಿಯಮಗಳು 2024ರ ಅಡಿಯಲ್ಲಿ ಅಧಿಸೂಚಿಸಲಾಗಿರುತ್ತದೆ.
ಸದರಿ ಕಾಯ್ದೆ ಹಾಗೂ ನಿಯಮಗಳಲ್ಲಿ ತಿಳಿಸಿರುವಂತೆ ಆಸ್ತಿ ತೆರಿಗೆ ಸುಸ್ತಿದಾರರಿಗೆ ಕಾರಣ ಕೇಳಿ ಪತ್ರ, ಆಸ್ತಿ ತೆರಿಗೆ ಬೇಡಿಕೆ ಪತ್ರ ಮಾಡಲಾಗಿದ್ದು, ಸಾಕಷ್ಟು ಕಾಲಾವಕಾಶವನ್ನು ನೀಡಲಾದ ನಂತರದಲ್ಲೂ ಬಾಕಿ ಉಳಿಸಿಕೊಂಡ ಪ್ರಕರಣಗಳ ಮಾಲೀಕರಿಗೆ ನಿಯತಕಾಲಿಕವಾಗಿ ಮೊಬೈಲ್ ಸಂದೇಶಗಳ ಮೂಲಕ ತಮ್ಮ ಸ್ವತ್ತಿನ ಆಸ್ತಿ ತೆರಿಗೆಯನ್ನು ಪಾವತಿಸಲು ತಿಳಿಸಲಾಗಿರುತ್ತದೆ.
ಮುಂದುವರೆದು ಸಾಕಷ್ಟು ಅವಕಾಶಗಳನ್ನು ನೀಡಿದ ನಂತರ ಗುರುತಿಸಲಾಗಿರುವ ಆಸ್ತಿ ತೆರಿಗೆಯನ್ನು ಪಾವತಿಸದ ಬೆಂಗಳೂರು ಪೂರ್ವ ನಗರ ಪಾಲಿಕೆಯ ಕೆ.ಆರ್.ಪುರ ವಲಯ-02 ವ್ಯಾಪ್ತಿಯಲ್ಲಿ ಸ್ವತ್ತುಗಳನ್ನು ಕಾಯ್ದೆ ಹಾಗೂ ನಿಯಮಗಳನ್ವಯ ಹರಾಜು ಪ್ರಕ್ರಿಯೆಗೆ ಒಳಪಡಿಸಲು ತಿರ್ಮಾನಿಸಲಾಗಿರುತ್ತದೆ.
ದಿನಾಂಕ 21.02.2026ರಂದು ಸಮಯ ಬೆಳಗ್ಗೆ 11 ಗಂಟೆಗೆ ವಲಯ ಜಂಟಿ ಆಯುಕ್ತರು (ಕೆ.ಆರ್.ಪುರ ವಲಯ-2) ಅವರ ಅಧ್ಯಕ್ಷತೆಯಲ್ಲಿ ಆಸ್ತಿ ತೆರಿಗೆ ಸುಸ್ತಿದಾರರೆಂದು ಗುರುತಿಸಲಾಗಿರುವ ಸ್ವತ್ತುಗಳಿಂದ ಹರಾಜಿನ ಮೂಲಕ ಬಾಕಿ ಆಸ್ತಿ ತೆರಿಗೆ ವಸೂಲಾತಿ ಮಾಡಲಾಗುವುದು. ಸದರಿ ಹರಾಜು ಪ್ರಕ್ರಿಯೆಯನ್ನು ಪ್ರಕ್ರಿಯೆಯನ್ನು ಗ್ರೇಟರ್ – ಬೆಂಗಳೂರು ಪ್ರಾಧಿಕಾರ, ಕೆ.ಆರ್.ಪುರ ವಲಯ -02 ಕಛೇರಿಯ ಮುಂಭಾಗದಲ್ಲಿ ನಡೆಸಲಾಗುವುದು
ಹರಾಜು ಪ್ರಕ್ರಿಯೆಯ ಮುನ್ನ ಪಟ್ಟಿಯಲ್ಲಿನ ಸ್ವತ್ತಿಗೆ ಸಂಪೂರ್ಣ ತೆರಿಗೆ ಪಾವತಿಸಿದ್ದಲ್ಲಿ ಅಂತಹ ಆಸ್ತಿಯನ್ನು ಹರಾಜಿನಿಂದ ಕೈ ಬಿಡಲಾಗುವುದು ಎಂದು ತಿಳಿಸಿದೆ. ಜೊತೆಗೆ ಹರಾಜು ಸಂದರ್ಭದಲ್ಲಿ ಸ್ವತ್ತಿನ ಮಾಲೀಕರು ಪ್ರಕ್ರಿಯೆಗೆ ಮುನ್ನ ತಮ್ಮ ಅವಹಾಲುಗಳನ್ನು ಜಂಟಿ ಆಯುಕ್ತರ ಕಛೇರಿಗೆ ಸಲ್ಲಿಸಲು ಅವಕಾಶವಿರುತ್ತದೆ.

