ಮುಂಬೈ: ಉದ್ಯೋಗ ಮತ್ತು ಶಿಕ್ಷಣದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡುತ್ತಿದ್ದ ಶೇಕಡ 5ರಷ್ಟು ಮೀಸಲಾತಿಯನ್ನು ಮಹಾರಾಷ್ಟ್ರ ಸರ್ಕಾರ ರದ್ದುಗೊಳಿಸಿದೆ.
ಶೇಕಡ 5ರಷ್ಟು ಮೀಸಲಾತಿ ಕಲ್ಪಿಸುವ ಹಿಂದಿನ ಸುಗ್ರೀವಾಜ್ಞೆಯ ಅವಧಿ ಮುಗಿದಿದ್ದು, ಈ ನಿರ್ಧಾರಕ್ಕೆ ನ್ಯಾಯಾಲಯದಿಂದಲೂ ಮಧ್ಯಂತರ ತಡೆಯಾಜ್ಞೆ ಇರುವ ಹಿನ್ನೆಲೆಯಲ್ಲಿ ಮೀಸಲು ರದ್ದುಗೊಳಿಸಿ ಮಹಾರಾಷ್ಟ್ರ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಹಿಂದಿನ ಕಾಂಗ್ರೆಸ್ -ಎನ್ಸಿಪಿ ಸರ್ಕಾರ ಮರಾಠರಿಗೆ ಶೇಕಡ 16ರಷ್ಟು, ಮುಸ್ಲಿಮರಿಗೆ ಶೇಕಡ 5ರಷ್ಟು ಕೋಟಾ ನೀಡಲು ನಿಗದಿಪಡಿಸಿ ಸುಗ್ರೀವಾಜ್ಞೆ ಹೊರಡಿಸಿತ್ತು. 2014ರ ಹಿಂದಿನ ನಿರ್ಧಾರಗಳು ಮತ್ತು ಸುತ್ತೋಲೆಗಳನ್ನು ಸರ್ಕಾರ ರದ್ದುಗೊಳಿಸಿದೆ.
ವಿಶೇಷ ಹಿಂದುಳಿದ ವರ್ಗದಲ್ಲಿರುವ ಮುಸ್ಲಿಮರಿಗೆ ಜಾತಿ ಮತ್ತು ಕೆನೆ ಪದರವಲ್ಲದ ಪ್ರಮಾಣ ಪತ್ರಗಳನ್ನು ನೀಡುವುದನ್ನು ನಿಲ್ಲಿಸಲಾಗಿದೆ ಎಂದು ಹೊಸ ಆದೇಶದಲ್ಲಿ ತಿಳಿಸಲಾಗಿದೆ. ಮಂಗಳವಾರದಿಂದಲೇ ಇದು ಅನುಷ್ಠಾನಗೊಂಡಿದೆ. ಮುಸ್ಲಿಂ ಸಮುದಾಯಕ್ಕೆ ಶೇ. 5 ಮೀಸಲಾತಿ ನೀಡುವ ಸುಗ್ರೀವಾಜ್ಞೆಗೆ ನ್ಯಾಯಾಲಯ ಮಧ್ಯಂತರ ತಡೆ ನೀಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

