ಇಂದೋರ್: ಪ್ರಿಯಕರ, ಪ್ರೇಯಸಿಯ ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಲ್ಲದೇ ಶವದ ಮೇಲೆ ಕುಳಿತು ಚಾಕು ಮುರಿಯುವವರೆಗೂ ಇರಿದಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ಆರೋಪಿಯನ್ನು ಪಿಯೂಷ್ ಧಮ್ನೋಟಿಯಾ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆದರೆ ಪ್ರೇಯಸಿಯನ್ನು ಕೊಲೆಗೈದ ಬಗ್ಗೆ ಆತನಿಗೆ ಕಿಂಚಿತ್ತೂ ಪಶ್ಚಾತ್ತಪವಿಲ್ಲ. ಕೊಲೆ ಬಗ್ಗೆ ಕೇಳಿದಾಗ ಮಾಧ್ಯಮದವರ ಮುಂದೆ ನಕ್ಕಿದ್ದಾನೆ. ಏನು ಆಗಬೇಕೋ ಅದೇ ಆಗಿದೆಬಿಡಿ ಎಂದಿದ್ದಾನೆ.
ಅಲ್ಲದೇ ಎಲ್ಲವನ್ನೂ ಮರೆತುಬಿಡಿ, ಆಗಬೇಕಾಗಿರುವುದು ಆಗಿದೆ, ನೀವು ತಿಳಿದುಕೊಂಡು ಏನು ಮಾಡುತ್ತೀರಿ ಎಂದು ಸುದ್ದಿಗಾರರಿಗೆ ಮರುಪ್ರಶ್ನಿಸಿದ್ದಾನೆ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದು ತೆರಳಿದ್ದಾನೆ.
ಫೆಬ್ರವರಿ 13 ರಂದು ಇಂದೋರ್‌ನ ದ್ವಾರಕಾಪುರಿ ಪ್ರದೇಶದ ಬಾಡಿಗೆ ಮನೆಯಲ್ಲಿ ಯುವತಿಯ ಕೊಳೆತ ಶವ ಪತ್ತೆಯಾಗಿತ್ತು. ಒಂದು ದಿನದ ಬಳಿಕ ಆರೋಪಿಯನ್ನು ಬಂಧಿಸಲಾಗಿತ್ತು. ನೆರೆಹೊರೆಯವರು ಕೆಟ್ಟ ವಾಸನೆ ಬರುತ್ತಿದೆ ಎಂದು ದೂರು ನೀಡಿದ ನಂತರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸ್ದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಶವದ ಕುತ್ತಿಗೆಯಲ್ಲಿ ಹಗ್ಗದ ಗುರುತುಗಳು ಪತ್ತೆಯಾಗಿತ್ತು.
ಪ್ರಿಯಕರ ಪಿಯುಷ್, ಯುವತಿಯ ಜೊತೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದ. ಆದರೆ ಆಕೆ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.ಕೊಲೆ ಬಳಿಕ ಆರೋಪಿ ಅದೇ ಕೋಣೆಯಲ್ಲೇ ಇದ್ದು, ಶವದ ಪಕ್ಕದಲ್ಲಿ ಕುಳಿತು ಮದ್ಯ ಸೇವಿಸಿದ್ದ. ಬಳಿಕ ಆಕೆಯ ಆತ್ಮವನ್ನು ಕರೆಯಲು ಪ್ರಯತ್ನಿಸಿದ್ದನಂತೆ
ಪೊಲೀಸ್ ಮೂಲಗಳ ಪ್ರಕಾರ, ಧಮ್ನೋಟಿಯಾ ಯುವತಿಯ ಮೇಲೆ ಲೈಂಗಿಕ ಕ್ರಿಯೆಗೆ ಒತ್ತಡ ಹೇರಿದ್ದ, ಆಕೆ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಹೇಳಿ ನಿರಾಕರಿಸಿದ್ದಳು. ಆಕೆಯ ಮೇಲೆ ಬಲವಂತವಾಗಿ ಹಲ್ಲೆ ನಡೆಸಿದ್ದ ಆತ, ಆಕೆಯ ಕೈಕಾಲುಗಳನ್ನು ಹಗ್ಗಗಳಿಂದ ಕಟ್ಟಿ, ಕಣ್ಣಿಗೆ ಬಟ್ಟೆ ಕಟ್ಟಿ, ಉಡುಗೊರೆ ನೀಡುವುದಾಗಿ ಹೇಳಿದ್ದ. ಅವಳು ಮತ್ತೆ ವಿರೋಧಿಸಿದಾಗ, ಅವನು ಅವಳ ಬಾಯಿಗೆ ಬಟ್ಟೆಯನ್ನು ತುರುಕಿ ಅವಳ ಎದೆಯ ಮೇಲೆ ಕುಳಿತು, ಅವಳು ಪ್ರಜ್ಞೆ ಕಳೆದುಕೊಳ್ಳುವವರೆಗೂ ಅವಳನ್ನು ಉಸಿರುಗಟ್ಟಿಸಿದ್ದ.
ಅವಳು ಉಸಿರಾಟವನ್ನು ನಿಲ್ಲಿಸಿದ್ದಾಳೆಂದು ಅರಿತುಕೊಂಡ ಅವನು, ಅವಳ ಎದೆಯ ಬಳಿ ಎಷ್ಟು ಬಲದಿಂದ ಇರಿದಿದ್ದನೆಂದರೆ ಚಾಕುವೇ ಮುರಿದು ಹೋಗಿತ್ತು. ಆದರೆ ಆ ಕ್ರೌರ್ಯ ಸಾವಿನೊಂದಿಗೆ ಕೊನೆಗೊಂಡಿಲ್ಲ. ಆಕೆಯನ್ನು ಕೊಂದ ನಂತರವೂ ಅವನು ಕೋಣೆಯೊಳಗೆ ಇದ್ದ. ಅವನು ಹೊರಗೆ ಬಂದು, ಮದ್ಯದ ಅಂಗಡಿಯಿಂದ ಬಿಯರ್ ಖರೀದಿಸಿ, ಹಿಂತಿರುಗಿ, ಆಕೆಯ ಶವದ ಪಕ್ಕದಲ್ಲಿ ಕುಳಿತು ಕುಡಿದಿದ್ದ. ವಿಚಾರಣೆಯ ಸಮಯದಲ್ಲಿ, ಅವನು ಶವದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬಟ್ಟೆ ಬದಲಾಯಿಸಿ ಪರಾರಿಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ, ಯುವತಿಯನ್ನು ಬೆತ್ತಲೆಯಾಗಿ ಬಿಟ್ಟು ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.
ಯುವತಿ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ತನ್ನ ಆಧಾರ್ ಕಾರ್ಡ್ ಸರಿಪಡಿಸಬೇಕೆಂದು ಮನೆಯಿಂದ ಹೊರಟಿದ್ದಳು. ಆಕೆಯ ತಂದೆ ಆಕೆಯನ್ನು ಕಲೆಕ್ಟರೇಟ್ ಬಳಿ ಡ್ರಾಪ್ ಮಾಡಿದ್ದರು. ನಂತರ ಆಕೆ ತನ್ನ ತಂಗಿಗೆ ಕರೆ ಮಾಡಿ, ತನ್ನ ಸಹಪಾಠಿ ಪಿಯೂಷ್ ಧಮ್ನೋಟಿಯಾ ಜೊತೆ ಹುಟ್ಟುಹಬ್ಬದ ಪಾರ್ಟಿಗೆ ಹೋಗುತ್ತಿರುವುದಾಗಿ ಮತ್ತು ರಾತ್ರಿ 11 ಗಂಟೆಗೆ ಹಿಂತಿರುಗುವುದಾಗಿ ಹೇಳಿದ್ದಳು. ಆದರೆ ವಾಪಾಸ್ ಆಗದಿದ್ದಾಗ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

