HomeKarnatakaಕಾಂಗ್ರೆಸ್ ಕಚೇರಿಗೆ ಕಡಿಮೆ ಬೆಲೆಗೆ ಸಿಎ ಸೈಟು ಹಂಚಿಕೆ: ವಿವಾದದಲ್ಲಿ ಕಾಂಗ್ರೆಸ್ ಸರ್ಕಾರ

ಕಾಂಗ್ರೆಸ್ ಕಚೇರಿಗೆ ಕಡಿಮೆ ಬೆಲೆಗೆ ಸಿಎ ಸೈಟು ಹಂಚಿಕೆ: ವಿವಾದದಲ್ಲಿ ಕಾಂಗ್ರೆಸ್ ಸರ್ಕಾರ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಿಎ ಸೈಟು ವಿವಾದಕ್ಕೆ ಸಿಲುಕಿದೆ. ಕಾಂಗ್ರೆಸ್‌ ಪಕ್ಷದ ಕಚೇರಿ ನಿರ್ಮಾಣ ಮಾಡಲು ಸಿಎ ಸೈಟುಗಳನ್ನು ಕಡಿಮೆ ಬೆಲೆಗೆ ಹಂಚಿಕೆ ಮಾಡಲಾಗಿದೆ ಎಂಬುದು ಸದ್ಯದ ಆರೋಪ. ಪ್ರತಿಪಕ್ಷಗಳು ಈ ವಿಚಾರ ಮುಂದಿಟ್ಟುಕೊಂಡು ಸರ್ಕಾರವನ್ನು ಟೀಕಿಸಿವೆ.

ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ‘ರಾಜ್ಯದ ಜನತೆಯ ಆಸ್ತಿಯನ್ನು ಕಾಂಗ್ರೆಸ್ ಪಕ್ಷ ತನ್ನ ಪಿತ್ರಾರ್ಜಿತ ಆಸ್ತಿ ಎಂಬಂತೆ ಬಳಸಿಕೊಳ್ಳುತ್ತಿದೆ’ ಎಂದು ಆರೋಪಿಸಿದ್ದಾರೆ.

‘ಬಡವರ ಹಿತ ಕಾಯುವ ಬದಲು ಕಾಂಗ್ರೆಸ್‌ ತನ್ನ ‘ಪಕ್ಷದ ಹಿತ’ಕ್ಕೆ ಸಾರ್ವಜನಿಕ ಆಸ್ತಿ ಲೂಟಿ ಮಾಡುತ್ತಿದೆ! ನಾಗರಿಕರಿಗೆ ಮೂಲಸೌಕರ್ಯ ಒದಗಿಸಬೇಕಾದ ಸುಮಾರು 24ಕ್ಕೂ ಹೆಚ್ಚು ನಾಗರಿಕ ಸೌಲಭ್ಯ (CA) ನಿವೇಶನಗಳನ್ನು ಕಡಿಮೆ ಬೆಲೆಗೆ ತನ್ನ ಪಕ್ಷದ ಕಚೇರಿ ನಿರ್ಮಾಣಕ್ಕೆ ಹಂಚಿಕೆ ಮಾಡಿಕೊಂಡಿರುವುದು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಪರಮಾವಧಿ’ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಸಾರ್ವಜನಿಕ ಉದ್ಯಾನವನ, ಗ್ರಂಥಾಲಯ ಅಥವಾ ಆಸ್ಪತ್ರೆಗಳಿಗೆ ಬಳಕೆಯಾಗಬೇಕಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಕಾಂಗ್ರೆಸ್ ಭವನಗಳಿಗೆ ಮೀಸಲಿಟ್ಟಿರುವುದು ರಾಜ್ಯದ ಜನತೆಗೆ ಮಾಡಿದ ದ್ರೋಹವಲ್ಲವೇ?’ ಎಂದು ಪ್ರಶ್ನೆ ಮಾಡಿದ್ದಾರೆ.

‘ಒಂದೆಡೆ ಬಡವರಿಗೆ ನಿವೇಶನ ನೀಡಲು ಜಾಗವಿಲ್ಲ ಎನ್ನುವ ಈ ಸರ್ಕಾರ, ಇನ್ನೊಂದೆಡೆ ತನ್ನ ಪಕ್ಷದ ಬಲವರ್ಧನೆಗೆ ಸಾರ್ವಜನಿಕ ಆಸ್ತಿಯನ್ನು ಕಬಳಿಸುತ್ತಿದೆ. ಲೂಟಿ ಹೊಡೆಯುವುದೇ ಕಾಂಗ್ರೆಸ್‌ನ ಮೂಲ ಸಿದ್ಧಾಂತ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಅಕ್ರಮ ಹಂಚಿಕೆಯನ್ನು ಕೂಡಲೇ ಹಿಂಪಡೆಯಬೇಕು, ಇಲ್ಲದಿದ್ದರೆ ಬಿಜೆಪಿ ಬೃಹತ್ ಹೋರಾಟ ಹಮ್ಮಿಕೊಳ್ಳಲಿದೆ’ ಎಂದು ಪ್ರಹ್ಲಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ.

ಬಿ.ಶ್ರೀರಾಮುಲು ಪೋಸ್ಟ್: ಮಾಜಿ ಸಚಿವ ಬಿ.ಶ್ರೀರಾಮುಲು ಸಹ ಇದೇ ವಿಚಾರದ ಕುರಿತು ಪೋಸ್ಟ್ ಹಾಕಿದ್ದು, ‘ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣಕ್ಕಾಗಿ ಬೆಲೆ ಬಾಳುವ CA ನಿವೇಶನಗಳನ್ನು ಕಡಿಮೆ ಬೆಲೆಗೆ ಪಡೆದು ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಆಡಳಿತರೂಢ ಕಾಂಗ್ರೆಸ್ ಸರ್ಕಾರದ ಮತ್ತೊಂದು ಹಗರಣ ಬಟಾ ಬಯಲಾದಂತಾಗಿದೆ’ ಎಂದು ಹೇಳಿದ್ದಾರೆ.

‘ಒಂದು ಕಡೆ ಬಡವರಿಗೆ ಮನೆ ಕೊಡಲು ನಿವೇಶನ ಇಲ್ಲ ಎಂದು ಬೊಬ್ಬೆ ಹಾಕುವ ಕಾಂಗ್ರೆಸ್ ಸರ್ಕಾರ, ತನ್ನ ಪಕ್ಷದ ಕಚೇರಿ ನಿರ್ಮಾಣಕ್ಕಾಗಿ ಲಕ್ಷಾಂತರ ರೂ. ಬೆಲೆ ಬಾಳುವ CA ನಿವೇಶನವನ್ನು ಕಡಿಮೆ ದರಕ್ಕೆ ಖರೀದಿ ಮಾಡಿಕೊಂಡಿರುವುದು ಅಧಿಕಾರದ ದುರ್ಬಳಕೆ ಮಡಿಕೊಂಡಿರುವುದಕ್ಕೆ ಹಿಡಿದ ಕೈಗನ್ನಡಿ’ ಎಂದು ತಿಳಿಸಿದ್ದಾರೆ.

‘ನಿಯಮಗಳ ಪ್ರಕಾರ, CA ನಿವೇಶನಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಬೇಕೇ ಹೊರತು ರಾಜಕೀಯ ಪಕ್ಷಗಳ ಕಚೇರಿಗಳನ್ನು ನಿರ್ಮಾಣ ಮಾಡಲು ಅವಕಾಶವಿಲ್ಲ. ಅಧಿಕಾರದಲ್ಲಿ ಇದ್ದೇವೆ ಎಂಬ ಒಂದೇ ಒಂದು ಕಾರಣಕ್ಕಾಗಿ ಕಾನೂನು ಗಾಳಿಗೆ ತೂರುವುದು ಎಷ್ಟರ ಮಟ್ಟಿಗೆ ಸರಿ?’ ಎಂದು ಕೇಳಿದ್ದಾರೆ.

‘ಅಧಿಕಾರಿಗಳೂ ಕೂಡ CA ನಿವೇಶನ ಕೊಡಲು ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಸಂಪುಟದಲ್ಲಿ ಅನುಮೋದನೆ ಪಡೆದುಕೊಂಡು ನಿಯಮಗಳನ್ನು ಧಿಕ್ಕರಿಸಿ ರಾಜ್ಯದಾದ್ಯಂತ 40 ಕೋಟಿ ರೂ. ಬೆಲೆಯ ನಿವೇಶನಗಳನ್ನು ಕೇವಲ 2 ಕೋಟಿ ರೂ. ಕಬಳಿಕೆ ಮಾಡಿದೆ. ಇದು ನ್ಯಾಯವೇ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹಾಗೂ DCM ಡಿಕೆ ಶಿವಕುಮಾರ್ ಅವರೇ?’ ಎಂದು ಪ್ರಶ್ನೆ ಮಾಡಿದ್ದಾರೆ.

‘ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣಕ್ಕೆ ಪಡೆದುಕೊಂಡಿರುವ CA ನಿವೇಶನಗಳನ್ನು ಕೂಡಲೇ ಸರ್ಕಾರಕ್ಕೆ ಹಿಂದಿರುಗಿಸಿ. ನೀವು ಖಾಸಗಿಯಾಗಿ ಖರೀದಿ ಮಾಡಿ ಎಷ್ಟು ಕೋಟಿ ಬೇಕಾದರೂ ಖರ್ಚು ಮಾಡಿ ನಿರ್ಮಿಸಿದರೆ ನಮ ಅಭ್ಯಂತರವಿಲ್ಲ. ಇಲ್ಲದಿದ್ದರೆ ನ್ಯಾಯಾಲಯದ ಮೆಟ್ಟಿಲೇರುವುದು ಶತಸಿದ್ಧ’ ಎಂದು ಎಚ್ಚರಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular