ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರುವುದಕ್ಕೂ ಮುನ್ನ ದರ್ಶನ್ ಸುತ್ತಮುತ್ತ ಇದ್ದ ಗುಂಪಿನ ಗಾತ್ರ ಬಂಧನಕ್ಕೊಳಗಾದ ಬಳಿಕ ಕಣ್ಮರೆಯಾಗಿದೆ ಎನ್ನುವುದು ವಾಸ್ತವ ಹಾಗೂ ಅಭಿಮಾನಿಗಳ ಕೋಪಕ್ಕೆ ಕಾರಣವಾದ ಅಂಶವೂ ಹೌದು.
ಹೌದು, ದರ್ಶನ್ ಈ ಪ್ರಕರಣದಲ್ಲಿ ಲಾಕ್ ಆಗುವ ಮುನ್ನ ಯಾವುದಾದರೂ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ ಎಂದರೆ ಸಾಕು ಅವರ ಸುತ್ತಲೂ ಕೆಲ ನಟರ ಪಡೆಯೇ ಇರುತ್ತಿತ್ತು, ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಗಜಪಡೆ ಎಂಬ ಹೆಸರೂ ಸಹ ಇತ್ತು. ಆದರೆ ಈಗ ಗಜಪಡೆಯಲ್ಲಿ ಉಳಿದುಕೊಂಡಿರುವುದು ನಟ ಧನ್ವೀರ್ ಮಾತ್ರ. ದರ್ಶನ್ ಜೈಲಿಗೆ ಹೋಗಿ ಬಂದ ನಂತರ ಹಾಗೂ ಮತ್ತೆ ಜೈಲಿಗೆ ಹೋದ ಬಳಿಕ ಬೆಂಬಲಕ್ಕೆ ನಿಂತದ್ದು ಧನ್ವೀರ್ ಮಾತ್ರ ಎಂಬುದು ದರ್ಶನ್ ಕುರಿತ ಸುದ್ದಿಗಳನ್ನು ನೋಡುವವರಿಗೆ ತಿಳಿದೇ ಇದೆ.
ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಸಹ ಈ ಗಜಪಡೆಯ ಒಂದು ಭಾಗ. ಆದರೆ ದರ್ಶನ್ ಜೈಲಿಗೆ ಹೋದ ಬಳಿಕ ಝೈದ್ ಖಾನ್ ದರ್ಶನ್ ಅವರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಿದರು ಎಂಬುದನ್ನು ಧನ್ವೀರ್ ಎಲ್ಲಿಯೂ ಹೆಸರು ತೆಗೆದುಕೊಳ್ಳದೇ ಹೇಳಿದ್ದರು. ಇದಕ್ಕೆ ಕಲ್ಟ್ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಉತ್ತರ ನೀಡಿದ್ದ ಝೈದ್ ಖಾನ್ ‘ಕಷ್ಟದ ಸಮಯದಲ್ಲಿ ನಾನು ಬೆಂಬಲಕ್ಕೆ ನಿಂತೆ, ನನ್ನ ಟಿಆರ್‌ಪಿ, ನಾನು ನಿಜವಾದ ತಮ್ಮ ಎನ್ನುವುದು ಬೇಡ. ಬಲಗೈನಲ್ಲಿ ಮಾಡುವುದು ಎಡಗೈಗೆ ಗೊತ್ತಾಗಬಾರದು’ ಎಂದು ಟಾಂಗ್ ಕೊಟ್ಟಿದ್ದರು.
ಇದಕ್ಕೆ ಚಾಮರಾಜನಗರದಲ್ಲಿ ನಡೆದಿದ್ದ ತಮ್ಮ ಹಯಗ್ರಿವ ಚಿತ್ರದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಧನ್ವೀರ್ ‘ನಾನು ಟಿಆರ್‌ಪಿಗಾಗಿ ಮಾತನಾಡುವುದಿಲ್ಲ. ಪ್ರಚಾರಕ್ಕಾಗಿ ಯಾರನ್ನೋ ಬಾಸ್ ಎನ್ನುವ ಅಭ್ಯಾಸ ನನಗಿಲ್ಲ. ಹಿಂದೆಯೂ ಇವರೇ, ಮುಂದೆಯೂ ಇವರೇ ನಮ್ಮ ಬಾಸ್. ಕ್ಯಾಮೆರಾ ಮುಂದೆ ಮಾತನಾಡುವ ಗಂಡಸರು ತುಂಬಾ ಜನ ಇದ್ದಾರೆ. ಅಖಾಡಕ್ಕೆ ಇಳಿದು ಮಾತನಾಡಲು ಮೀಟರ್ ಬೇಕು ಮೀಟರ್’ ಎಂದು ದರ್ಶನ್ ಫೋಟೊ ಎತ್ತಿಹಿಡಿದು ಮಾತನಾಡಿ ಧನ್ವೀರ್ ಹೇಳಿಕೆಗೆ ಕೌಂಟರ್ ಕೊಟ್ಟಿದ್ದರು.
ಹೀಗೆ ದರ್ಶನ್ ವಿಚಾರವಾಗಿ ಇಬ್ಬರ ನಡುವೆ ಉಂಟಾಗಿದ್ದ ವಿವಾದದ ಬಗ್ಗೆ ನಟ ಧನ್ವೀರ್ ಮತ್ತೊಮ್ಮೆ ‘ಫಿಲ್ಮಿಬೀಟ್ ಕನ್ನಡ’ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದು, ‘ ಎಲ್ಲೋ ಕುಳಿತು ಕ್ಯಾಮೆರಾ ಮುಂದೆ, ಟಿವಿ ಮುಂದೆ ನಾವು ಮಾಡಿಬಿಟ್ಟಿದ್ದೇವೆ, ನಾವು ಹೇಳಿಕೊಳ್ಳುವುದಿಲ್ಲ, ಅದೇನೋ ಆನೆಗೆ ಎರಡು ಹಲ್ಲು ಅಂತೆಲ್ಲ ನಿನ್ನೆ ಮೊನ್ನೆ ಕನ್ನಡ ನೆಟ್ಟಗೆ ಮಾತನಾಡಲು ಬರದೆ ಇದ್ದವರು ಆ ವ್ಯಕ್ತಿ ಬಗ್ಗೆ, ಅವರ ನಡತೆ ಬಗ್ಗೆ ಮಾತನಾಡುತ್ತಾರೆ ಎಂದರೆ ಆ ಯೋಗ್ಯತೆ ಇದ್ದವರು ಬಂದು ನಿಂತುಕೊಂಡು ಮಾತನಾಡಬೇಕಿತ್ತು, ಇಲ್ವ ಸುಮ್ಮನಿರಬೇಕು’ ಎಂದರು.
ಮುಂದುವರಿದು ‘ನಾನು ಸುಮಾರು ದಿನ ಗಮನಿಸಿದೆ. ಯಾವಾಗ ಆ ವ್ಯಕ್ತಿ ಇಂಥವನು, ಅಂಥವನು ಎಂದು ಉಲ್ಲೇಖವಾಗಲು ಶುರುವಾಯಿತೋ ಆಗ ನಾನು ಅನಿವಾರ್ಯವಾಗಿ ಮಾತನಾಡಬೇಕಾಯಿತು. ಏಕೆಂದರೆ ಆ ದಿನ ಅಲ್ಲಿ ಯಾರಿದ್ದರು, ಏನಾಯಿತು ಎಂದು ದರ್ಶನ್ ಅಣ್ಣನಿಗೆ ಗೊತ್ತು, ವಿಜಯಲಕ್ಷ್ಮಿ ಅತ್ತಿಗೆಗೆ ಗೊತ್ತು. ಯಾವತ್ತೂ, ಸಾಯುವ ತನಕ ನಾನು ಮಾಡಿದೆ ಎಂದು ನಾನು ಹೇಳಿಕೊಳ್ಳುವುದಿಲ್ಲ. ನಮಗೆ ಕಷ್ಟದ ದಿನಗಳಲ್ಲಿ ನಿಂತುಕೊಂಡಿದ್ದರು, ಹೀಗಾಗಿ ಇದು ಮಾತ್ರವಲ್ಲ, ಇನ್ನೂ ಎಂತಹದ್ದೇ ಕಷ್ಟ ಬರಲಿ ನಾನು ದರ್ಶನ್ ಅಣ್ಣನ ಪರ ನಿಲ್ಲುತ್ತೇನೆ ಎಂದು ಎದೆ ತಟ್ಟಿ ಹೇಳಿಕೊಳ್ಳುತ್ತೇನೆ. ಅಂತಹ ಸಮಯದಲ್ಲಿ ಎಲ್ಲೋ ಕುಳಿತುಕೊಂಡು ಕೈನಲ್ಲಿ ಆಗದಿದ್ರೂ ಡೈಲಾಗ್‌ಗಳನ್ನು ಹೊಡೆದುಕೊಂಡು ಮಾತನಾಡುವುದು ಗಂಡಸ್ತನದ ಬಾಳೇ ಅಲ್ಲ. ಚಿತ್ರರಂಗದವರದ್ದು ಬಣ್ಣದ ಬಾಳು ಅಂತಾರೆ. ಬಣ್ಣವನ್ನು ಮುಖಕ್ಕೆ ಹಚ್ಚಿಕೊಂಡು ಮಾಡಬೇಕು. ಕೆಲವರು ಬಣ್ಣವನ್ನೇ ಜೀವನ ಎಂದುಕೊಂಡಿದ್ದಾರೆ’ ಎಂದು ಧನ್ವೀರ್ ಹೆಸರು ಹೇಳದೆಯೇ ಝೈದ್ ಖಾನ್‌ಗೆ ತಿವಿದರು.
ಅಲ್ಲದೇ ‘ದೇವರು ಅಧಿಕಾರ, ಆಸ್ತಿ, ಐಶ್ವರ್ಯ ಎಲ್ಲವನ್ನೂ ಕೊಟ್ಟಿದ್ದಾನೆ. ಆ ರೀತಿ ಇರುವಾಗ ಅವರು ಒಬ್ಬ ಕಷ್ಟದಲ್ಲಿದ್ದ ವ್ಯಕ್ತಿಗೆ ಏನು ಬೇಕಾದರೂ ಮಾಡಬಹುದಿತ್ತಲ್ಲ. ಅದೇನೋ ಅಂತಾರಲ್ಲ ಭಗವಂತ ಎಲ್ಲರಿಗೂ ಎಲ್ಲವನ್ನೂ ಕೊಡುವುದಿಲ್ಲವಂತೆ ಏನಾದರೂ ಕಿತ್ತುಕೊಂಡುಬಿಡುತ್ತಾನಂತೆ. ಹಾಗೆನೇ ಇವರಿಗೆ ಗಂಡಸು ಅಂತ ಹುಟ್ಟಿಸಿದ ಮೇಲೆ ಭಗವಂತ ಕಿತ್ತುಕೊಂಡುಬಿಟ್ಟಿರಬೇಕು ಪಾಪ ಅದಕ್ಕೆ ಈ ರೀತಿ ಮಾತನಾಡುತ್ತಾರೆ’ ಎಂದು ಧನ್ವೀರ್ ಖಾರವಾಗಿ ಟಾಂಗ್ ಕೊಟ್ಟಿದ್ದಾರೆ.
ಇನ್ನು ದರ್ಶನ್ ಜೈಲಿನಲ್ಲಿದ್ದಾಗ ಬಂದು ನೋಡಲಿಲ್ಲ ಎಂದೂ ಸಹ ಕಿಡಿಕಾರಿದ ಧನ್ವೀರ್ ‘ಚಿತ್ರ ಬಿಡುಗಡೆಗೆ ಎರಡು ದಿನ ಇದ್ದಾಗ ಬಾಸು ಎಂದುಕೊಂಡು ಬಂದು ಪ್ರಚಾರ ತೆಗೆದುಕೊಂಡರು, ಅಲ್ಲಿಯವರೆಗೆ ಇವರಿಗೆ ಬಾಸ್ ನೆನಪಾಗಲಿಲ್ವ? ಜೈಲಿನಲ್ಲಿದ್ದಾಗ ಬಂದು ನೋಡದೇ ಬಿಡುಗಡೆಯಾದ ಮಾರನೇ ದಿನ ಪಾತ್ರೆ ತುಂಬಾ ಬಿರಿಯಾನಿ ಕಳುಹಿಸುವ ಮಕ್ಕಳು ಇವರು. ಇವರಿಗೆ ಅಧಿಕಾರ ಇತ್ತಲ್ವ ಜೈಲಿ ಹೋಗಿ ನೋಡಬಹುದಿತ್ತಲ್ಲ’ ಎಂದು ಆಕ್ರೋಶ ಹೊರಹಾಕಿದರು.

