ನವದೆಹಲಿ: ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭೆ ಚುನಾವಣೆ ದಿನಾಂಕ ಮಾರ್ಚ್ ಮಧ್ಯಭಾಗದಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ.
ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಮತಪಟ್ಟಿ ಸಮಗ್ರ ಪರಿಷ್ಕರಣೆ(ಎಸ್ಐಆರ್) ಅಂತಿಮ ಘಟ್ಟ ತಲುಪಿದೆ. ಜೊತೆಗೆ ಚುನಾವಣಾ ಪೂರ್ವ ಸಿದ್ಧತೆ ನಡೆಸಲಾಗಿದ್ದು ಮಾರ್ಚ್ ಮಧ್ಯಭಾಗದಲ್ಲಿ ಚುನಾವಣೆಗೆ ದಿನಾಂಕ ನಿಗದಿಯಾಗಲಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದಾರೆ.
ಮೇ ಹಾಗೂ ಜೂನ್ ತಿಂಗಳಲ್ಲಿ ಐದು ವಿಧಾನಸಭೆಗಳ ಅವಧಿ ಅಂತ್ಯವಾಗಲಿದೆ. ಏಪ್ರಿಲ್, ಮೇ ತಿಂಗಳ ನಡುವೆ ವಿಧಾನಸಭೆ ಚುನಾವಣೆ ನಡೆಸಲು ಆಯೋಗ ನಿರ್ಧರಿಸಿದೆ. ಕಳೆದ ಬಾರಿ ಪಶ್ಚಿಮ ಬಂಗಾಳದಲ್ಲಿ ಎಂಟು ಹಂತದಲ್ಲಿ ಮತದಾನ ನಡೆಸಲಾಗಿತ್ತು. ಅಸ್ಸಾಂನಲ್ಲಿ ಎರಡು ಹಂತದಲ್ಲಿ ಮತದಾನ ನಡೆದಿತ್ತು. ಕೇರಳ, ಪುದುಚೇರಿ ತಮಿಳುನಾಡಿನಲ್ಲಿ ಒಂದು ಹಂತದಲ್ಲಿ ಚುನಾವಣೆ ನಡೆದಿತ್ತು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನೇತೃತ್ವದ ಚುನಾವಣಾ ಆಯೋಗದ ತಂಡ ಸಿದ್ಧತೆಗಳ ಪರಿಶೀಲನೆ ನಡೆಸಲಿದೆ.

