ಬೆಂಗಳೂರು : ಪ್ರೇಮಿಗಳ ದಿನಾಚರಣೆಯ ಪ್ರಯುಕ್ತ ವಿಶ್ವದಾದ್ಯಂತ ತಾಜಾ ಗುಲಾಬಿಗಳಿಗೆ ಉಂಟಾದ ಭಾರಿ ಬೇಡಿಕೆಯನ್ನು ಪೂರೈಸಲು ಬೆಂಗಳೂರು ವಿಮಾನ ನಿಲ್ದಾಣವು ಸನ್ನದ್ಧವಾಗಿತ್ತು. ಈ ಋತುವಿನಲ್ಲಿ ವಿಮಾನ ನಿಲ್ದಾಣದಿಂದ ಸುಮಾರು 6 ಕೋಟಿಗೂ ಹೆಚ್ಚು (60 ಮಿಲಿಯನ್) ಗುಲಾಬಿ ಹೂವುಗಳನ್ನು ರಫ್ತು ಮಾಡುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಲಾಗಿದೆ.
ಇದು ಕಳೆದ ವರ್ಷಕ್ಕಿಂತ ಟನ್ ಲೆಕ್ಕದಲ್ಲಿ ಶೇ. 64 ರಷ್ಟು ಹೆಚ್ಚಿನ ಪ್ರಗತಿಯಾಗಿದೆ. ಸಿಂಗಾಪುರ, ಲಂಡನ್ ಮತ್ತು ನ್ಯೂಯಾರ್ಕ್ ಸೇರಿದಂತೆ 26 ಅಂತರಾಷ್ಟ್ರೀಯ ಹಾಗೂ 47 ದೇಶೀಯ ನಗರಗಳಿಗೆ ಇಲ್ಲಿನ ಗುಲಾಬಿಗಳು ರವಾನೆಯಾಗಿದ್ದು, ಬೆಂಗಳೂರು ಮತ್ತೊಮ್ಮೆ ಜಾಗತಿಕ ಹೂವಿನ ಮಾರುಕಟ್ಟೆಯ ಕೇಂದ್ರವಾಗಿ ಹೊರಹೊಮ್ಮಿದೆ.ವಿಶ್ವದಾದ್ಯಂತ ವ್ಯಾಲೆಂಟೈನ್ಸ್ ಸೀಸನ್ನಲ್ಲಿ ತಾಜಾ ಗುಲಾಬಿಗಳಿಗೆ ಇರುವ ಭಾರಿ ಬೇಡಿಕೆಯಿಂದಾಗಿ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (BLR Airport) ಈ ಬಾರಿ ಸುಮಾರು 60 ಮಿಲಿಯನ್ (6 ಕೋಟಿ) ಗುಲಾಬಿ ಹೂವುಗಳನ್ನು ರಫ್ತು ಮಾಡಿದೆ.
ಹೌದು. ಪ್ರೇಮಿಗಳ ದಿನಾಚರಣೆಗೆ ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್’ನಿಂದ 6 ಕೋಟಿಗೂ ಹೆಚ್ಚು ಗುಲಾಬಿಗಳ ರಫ್ತು ಆಗಿದೆ. ಇದರ ಒಟ್ಟು ತೂಕ 2,700 ಮೆಟ್ರಿಕ್ ಟನ್ಗಳಿಗಿಂತಲೂ (MT) ಹೆಚ್ಚಿದೆ. ಈ ಹೂವುಗಳನ್ನು 26 ಅಂತರಾಷ್ಟ್ರೀಯ ಮತ್ತು 47 ದೇಶೀಯ ಸ್ಥಳಗಳಿಗೆ ರವಾನಿಸಲಾಗಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ಗುಲಾಬಿ ಹೂವುಗಳ ಪ್ರಮಾಣದಲ್ಲಿ ಶೇ. 38 ರಷ್ಟು ಮತ್ತು ಒಟ್ಟು ತೂಕದಲ್ಲಿ (Tonnage) ಶೇ. 64 ರಷ್ಟು ಏರಿಕೆ ಕಂಡುಬಂದಿದೆ.
ಅಂತರಾಷ್ಟ್ರೀಯ ರಫ್ತು 305 ಮೆಟ್ರಿಕ್ ಟನ್ ತಲುಪಿದ್ದು, ಸಿಂಗಾಪುರ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಕೌಲಾಲಂಪುರ್, ಅಬುಧಾಬಿ, ನ್ಯೂಯಾರ್ಕ್ ಮತ್ತು ಕುವೈತ್ ಇವೆ.ಈ ವರ್ಷ ಲಾಸ್ ಏಂಜಲೀಸ್, ಲಂಡನ್ ಗ್ಯಾಟ್ವಿಕ್, ಡಲ್ಲಾಸ್, ಟೊರೊಂಟೊ ಮತ್ತು ಒರ್ಲ್ಯಾಂಡೊದಂತಹ ಹೊಸ ಅಂತರಾಷ್ಟ್ರೀಯ ನಗರಗಳಿಗೆ ಗುಲಾಬಿಗಳನ್ನು ಕಳುಹಿಸಲಾಗಿದೆ.ಭಾರತದೊಳಗೆ 2,402 ಮೆಟ್ರಿಕ್ ಟನ್ ಗುಲಾಬಿಗಳನ್ನು ಸಾಗಿಸಲಾಗಿದ್ದು, ಶೇ. 79 ರಷ್ಟು ಬೆಳವಣಿಗೆ ದಾಖಲಾಗಿದೆ. ದೆಹಲಿ ಮತ್ತು ಕೋಲ್ಕತ್ತಾ ಪ್ರಮುಖ ಬೇಡಿಕೆಯ ನಗರಗಳಾಗಿವೆ.
ಅಧಿಕ ಬೆಳವಣಿಗೆ ಕಂಡ ನಗರಗಳು: ಕೋಲ್ಕತ್ತಾ, ಮುಂಬೈ, ಚಂಡೀಗಢ ಮತ್ತು ಲಕ್ನೋ ನಗರಗಳು ಕಳೆದ ಸಾಲಿಗಿಂತ ಶೇ. 150 ಕ್ಕೂ ಹೆಚ್ಚು ಪ್ರಗತಿಯನ್ನು ದಾಖಲಿಸಿವೆ.
ತಂತ್ರಜ್ಞಾನದ ಬೆಂಬಲ: ಈ ಬೃಹತ್ ಪ್ರಮಾಣದ ಹೂವುಗಳ ಸಾಗಾಟಕ್ಕೆ ವಿಮಾನ ನಿಲ್ದಾಣದ ಸುಧಾರಿತ ಕಾರ್ಗೋ ಮೂಲಸೌಕರ್ಯ ಮತ್ತು ಕೋಲ್ಡ್ ಚೈನ್ (ಶೀತಲೀಕರಣ) ವ್ಯವಸ್ಥೆ ಪ್ರಮುಖ ಕಾರಣವಾಗಿದೆ. ಹೂವುಗಳ ತಾಜಾತನವನ್ನು ಕಾಪಾಡಲು ನೈಜ-ಸಮಯದ ಟ್ರ್ಯಾಕಿಂಗ್ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಈ ಸಾಧನೆಯು ಕಳೆದ ಐದು ವರ್ಷಗಳಿಂದ ಬೆಂಗಳೂರು ವಿಮಾನ ನಿಲ್ದಾಣವು ಭಾರತದ ಪ್ರಮುಖ ‘ಪೆರಿಷಬಲ್ ಎಕ್ಸ್ಪೋರ್ಟ್ಸ್’ (ಬೇಗ ಹಾಳಾಗುವ ವಸ್ತುಗಳ ರಫ್ತು) ಕೇಂದ್ರವಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿರುವುದನ್ನು ತೋರಿಸುತ್ತದೆ.

