ಶ್ರೀಲಂಕಾದ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 30ನೇ ಪಂದ್ಯ ನಡೆಯುತ್ತಿದ್ದು, ಬಿ ಗುಂಪಿನ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆರಿಸಿಕೊಂಡಿದ್ದು, ಆಸ್ಟ್ರೇಲಿಯಾ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ 20 ಓವರ್ಗಳಲ್ಲಿ 181 ರನ್ ಕಲೆಹಾಕಿ ಆಲ್ಔಟ್ ಅಗಿ ಶ್ರೀಲಂಕಾಗೆ 182 ರನ್ಗಳ ಗುರಿಯನ್ನು ನೀಡಿದೆ.
ಆಸ್ಟ್ರೇಲಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಮಿಚೆಲ್ ಮಾರ್ಷ್ ಹಾಗೂ ಟ್ರಾವಿಸ್ ಹೆಡ್ ತಲಾ ಅರ್ಧಶತಕ ಬಾರಿಸಿ ಶತಕದ ಜತೆಯಾಟವನ್ನಾಡಿದರು. ಟ್ರಾವಿಸ್ ಹೆಡ್ 29 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 56 ರನ್ ಗಳಿಸಿದರೆ, ಮಿಚೆಲ್ ಮಾರ್ಷ್ 27 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 54 ರನ್ ಬಾರಿಸಿದರು. ಹೀಗೆ ಉತ್ತಮ ಆರಂಭ ಪಡೆದುಕೊಂಡಿದ್ದ ಆಸ್ಟ್ರೇಲಿಯಾ ಪರ ನಂತರ ಕಣಕ್ಕಿಳಿದ ಕ್ಯಾಮೆರಾನ್ ಗ್ರೀನ್ ಹಾಗೂ ಟಿಮ್ ಡೇವಿಡ್ ಬೇಗನೆ ಪೆವಿಲಿಯನ್ ಸೇರಿಕೊಂಡರು. ಕ್ಯಾಮೆರಾನ್ ಗ್ರೀನ್ 3 ರನ್, ಟಿಮ್ ಡೇವಿಡ್ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನುಳಿದಂತೆ ಜೋಶ್ ಇಂಗ್ಲಿಸ್ 27, ಗ್ಲೆನ್ ಮ್ಯಾಕ್ಸ್ವೆಲ್ 22, ಕೂಪರ್ ಕೋನೊಲಿ 3, ಮಾರ್ಕಸ್ ಸ್ಟೊಯಿನಿಸ್ 4, ಕ್ಷೇವಿಯರ್ ಬಾರ್ಟ್ಲೆಟ್ ಡಕ್ಔಟ್, ಆಡಂ ಜಂಪಾ 1 ರನ್ ಹಾಗೂ ನೇಥನ್ ಎಲ್ಲಿಸ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು. ಹೀಗೆ ಮೊದಲ ವಿಕೆಟನ್ನು 8.3 ಓವರ್ನಲ್ಲಿ 104 ರನ್ ಗಳಿಸಿದ್ದಾಗ ಕಳೆದುಕೊಂಡ ಆಸ್ಟ್ರೇಲಿಯಾ ನಂತರ ಸಾಲು ಸಾಲಾಗಿ ವಿಕೆಟ್ ಕಳೆದುಕೊಂಡು ತಮ್ಮ ಕಡೆಯಿದ್ದ ಪಂದ್ಯವನ್ನು ಬೃಹತ್ ಮೊತ್ತವಾಗಿ ಪರಿವರ್ತನೆ ಮಾಡುವಲ್ಲಿ ಎಡವಿದೆ.
ಶ್ರೀಲಂಕಾ ಪರ ದುಶನ್ ಹೇಮಂತ ಮೂರು ವಿಕೆಟ್, ದುಷ್ಮಂತ ಚಮೀರ ಎರಡು ವಿಕೆಟ್, ದುನಿತ್ ವೆಲ್ಲಾಲಗೆ, ಮಹೀಶ ತೀಕ್ಷಣ ಹಾಗೂ ಕಮಿಂದು ಮೆಂಡಿಸ್ ತಲಾ ಒಂದೊಂದು ವಿಕೆಟ್ ಪಡೆದರು.

