ಕೇರಳ ವಿಧಾನಸಭೆ ಚುನಾವಣೆ 2026ರ ತಯಾರಿ ನಡೆಯುತ್ತಿದೆ. ರಾಜ್ಯದ ಆಡಳಿತ ಪಕ್ಷ ಎಡಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್). ಸತತ ಎರಡು ಚುನಾವಣೆಗಳಲ್ಲಿ ಜಯಗಳಿಸುವ ಮೂಲಕ ಎಲ್‌ಡಿಎಫ್ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಉತ್ಸಾಹದಲ್ಲಿದ್ದು ಯುಡಿಎಫ್ ಸರ್ಕಾರ ರಚನೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಆದರೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಕಾಂಗ್ರೆಸ್ ಚುನಾವಣೆಯಲ್ಲಿ ಸೋಲು ಕಾಣಲಿದೆ. ಎಲ್‌ಡಿಎಫ್ ಅಧಿಕಾರಕ್ಕೆ ಬರಲಿದ್ದು, ಕೇರಳ ಮುಖ್ಯಮಂತ್ರಿಯಾಗಿ 3ನೇ ಅವಧಿಗೆ ಪಿಣರಾಯಿ ವಿಜಯನ್ ಆಯ್ಕೆಯಾಗಲಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿ ಮಾಡುವ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಕೇರಳ ಚುನಾವಣೆ 2026ರ ಕುರಿತು ಹೇಳಿಕೆ ನೀಡಿದ್ದಾರೆ. “ಒಬ್ಬ ಕಾಂಗ್ರೆಸ್ಸಿಗನಾಗಿ ಯುಡಿಎಫ್ ಗೆಲ್ಲುವುದನ್ನು ನೋಡಲು ನಾನು ಬಯಸುತ್ತೇನೆ. ಆದರೆ ನಾನು ಸತ್ಯವನ್ನೇ ಹೇಳಲು ಇಚ್ಛಿಸುತ್ತೇನೆ. ಪಿಣರಾಯಿ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ” ಎಂದು ಹೇಳಿದ್ದಾರೆ.
ಮಣಿಶಂಕರ್ ಅಯ್ಯರ್ ಹೇಳಿಕೆ: ಸೋಮವಾರ ಮಾತನಾಡಿದ ಮಣಿಶಂಕರ್ ಅಯ್ಯರ್, ” ಪಿಣರಾಯಿ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಏಕೆಂದರೆ ಕೇರಳದ 75 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದ್ದ ಸಂದರ್ಭದಲ್ಲಿ ಸರ್ಕಾರ ಬದಲಾಗಲಿಲ್ಲ. ಆಡಳಿತಾರೂಢ ಸರ್ಕಾರಗಳು ಪರ್ಯಾಯವಾಗಿ ಬದಲಾಗುವ ಸಂಪ್ರದಾಯವನ್ನು ಮುರಿಯಲು ಅವರಿಗೆ ಸಾಧ್ಯವಾಗದಿದ್ದರೆ, ಎಡರಂಗದ ಸರ್ಕಾರವನ್ನು ಸೋಲಿಸುವ ಸಾಮರ್ಥ್ಯ ಅವರಿಗೆ ಇದೆ ಎಂದು ನನಗೆ ಅನಿಸುವುದಿಲ್ಲ” ಎಂದು ಹೇಳಿದರು.
“ರಾಜ್ಯದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳನ್ನು ಬಲಪಡಿಸುವ ಮೂಲಕ ಎಲ್‌ಡಿಎಫ್ ಸರ್ಕಾರವು ರಾಜೀವ್ ಗಾಂಧಿಯವರ ಕನಸನ್ನು ನನಸು ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಮರಳಲು ಪ್ರಯತ್ನಿಸುತ್ತಿದೆ. ಆದರೆ ಈ ಚುನಾವಣೆ ಬಳಿಕ ರಾಜ್ಯದಲ್ಲಿ ಪಿಣರಾಯಿ ಅವರು ಮೂರನೇ ಬಾರಿಗೆ ಅಧಿಕಾರವನ್ನು ಪಡೆಯಬಹುದು” ಎಂದರು.
ಆದರೆ ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಮಾತನಾಡಿ ಅಯ್ಯರ್ ಅವರ ಹೇಳಿಕೆಗಳನ್ನು ತಳ್ಳಿಹಾಕಿದರು. “ಪಕ್ಷವು ಅವರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅಯ್ಯರ್ ಅವರು ಇನ್ನು ಮುಂದೆ ಕಾಂಗ್ರೆಸ್‌ನ ಭಾಗವಲ್ಲ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಈಗಾಗಲೇ ಸ್ಪಷ್ಟಪಡಿಸಿದ್ದಾರೆ” ಎಂದು ತಿಳಿಸಿದರು.
ಕೇರಳ ಕಾಂಗ್ರೆಸ್ ನಾಯಕತ್ವವನ್ನು ಅಯ್ಯರ್ ಲೇವಡಿ ಮಾಡಿದ್ದಾರೆ. “ಸತೀಶನ್ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ನನಗೆ ಭರವಸೆ ನೀಡಿ, ಆಗ ಪಿಣರಾಯಿ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ನನ್ನ ಹೇಳಿಕೆಯನ್ನು ಹಿಂಪಡೆಯಲು ನಾನು ಸಿದ್ಧನಿದ್ದೇನೆ” ಎಂದು ಸವಾಲು ಹಾಕಿದರು.
ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದಿಲ್ಲ ಮತ್ತು ಚುನಾವಣೆಯ ನಂತರವೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.
ಮಣಿಶಂಕರ್ ಅಯ್ಯರ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್ ಅವರನ್ನು ವೈಯಕ್ತಿಕವಾಗಿ ಟೀಕಿಸಿದ್ದಾರೆ.

