HomeKarnatakaಕಾಂಗ್ರೆಸ್ ಸರ್ಕಾರದ 1000 ದಿನದ ಸಮಾವೇಶ: ಹೈಕಮಾಂಡ್ ನಾಯಕರ ಗೈರು

ಕಾಂಗ್ರೆಸ್ ಸರ್ಕಾರದ 1000 ದಿನದ ಸಮಾವೇಶ: ಹೈಕಮಾಂಡ್ ನಾಯಕರ ಗೈರು

ಕರ್ನಾಟಕದ ಕಾಂಗ್ರೆಸ್ ಸರ್ಕಾರ 1000 ದಿನಗಳನ್ನು ಪೂರೈಸಿರುವ ಹಿನ್ನೆಲೆ ಹಾವೇರಿಯಲ್ಲಿ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ಆಯೋಜನೆ ಮಾಡಲಾಗಿತ್ತು. ಶನಿವಾರ ನಡೆದ ಈ ಸಮಾವೇಶಕ್ಕೆ ಹೈಕಮಾಂಡ್ ನಾಯಕರು ಗೈರು ಹಾಜರಾಗುವ ಮೂಲಕ ಅಚ್ಚರಿ ಮೂಡಿಸಿದರು.

ಈ ಸಮಾವೇಶಕ್ಕೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಆಹ್ವಾನ ನೀಡಲಾಗಿತ್ತು.

ಆದರೆ ಯಾವ ನಾಯಕರು ಸಹ ಹಾವೇರಿ ಸಮಾವೇಶದಲ್ಲಿ ಪಾಲ್ಗೊಳ್ಳಲಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರು ನಗರದಲ್ಲಿದ್ದರು. ಆದರೆ ಅವರು ಹಾವೇರಿ ಸಮಾವೇಶಕ್ಕೆ ಹೋಗಲಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶನಿವಾರ ಸಂಜೆ ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಗೌರವಾಧ್ಯಕ್ಷರು, ಮಾಜಿ ಸಚಿವರು ಆದ ಲಿಂಗೈಕ್ಯ ಡಾ.ಭೀಮಣ್ಣ ಖಂಡ್ರೆ ಅವರ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹೈಕಮಾಂಡ್ ನಾಯಕರು ಗರಂ: ಪಕ್ಷದ ಮೂಲಗಳ ಮಾಹಿತಿ ಪ್ರಕಾರ ಕರ್ನಾಟಕ ಕಾಂಗ್ರೆಸ್ ನಾಯಕತ್ವ ಬದಲಾವಣೆ ಗೊಂದಲಕ್ಕೆ ಹೈಕಮಾಂಡ್ ನಾಯಕರು ಗರಂ ಆಗಿದ್ದಾರೆ. ಆದ್ದರಿಂದ ಸರ್ಕಾರದ 1000 ದಿನಗಳ ಸಮಾವೇಶಕ್ಕೆ ನಾಯಕರು ಗೈರಾಗಿದ್ದರು.

ನಾಯಕತ್ವ ಬದಲಾವಣೆ ವಿಚಾರದಲ್ಲಿ ಮೌನವಾಗಿರಿ ಎಂದು ಹೈಕಮಾಂಡ್ ನಾಯಕರು ಈಗಾಗಲೇ ರಾಜ್ಯದ ನಾಯಕರಿಗೆ ಸೂಚನೆಗಳನ್ನು ನೀಡಿದ್ದಾರೆ. ಆದರೆ ರಾಜ್ಯದ ಸಚಿವರು, ಶಾಸಕರು ಮಾಧ್ಯಮಗಳ ಮುಂದೆ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡುತ್ತಲೇ ಇದ್ದಾರೆ.

2025ರ ನವೆಂಬರ್‌ನಲ್ಲಿ ಸರ್ಕಾರ ಎರಡೂವರೆ ವರ್ಷ ಪೂರೈಸಿತ್ತು. ಆಗ ಆರಂಭವಾದ ನಾಯಕತ್ವ ಬದಲಾವಣೆ ಚರ್ಚೆಗೆ ಇನ್ನೂ ಸಹ ತೆರೆ ಬಿದ್ದಿಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದು ಹೇಳಿದ್ದಾರೆ. ಆದರೆ ತಮ್ಮ ಬೆಂಬಲಿಗರ ಹೇಳಿಕೆ ತಡೆಯಲು ವಿಫಲರಾಗಿದ್ದಾರೆ.

ಈ ನಡುವೆ ಡಿ.ಕೆ.ಶಿವಕುಮಾರ್ ಹಲವು ಬಾರಿ ದೆಹಲಿಗೆ ಭೇಟಿ ನೀಡಿದ್ದಾರೆ. ಅಲ್ಲದೇ ಹೈಕಮಾಂಡ್ ನಾಯಕರ ಜೊತೆ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಸಿದ್ದಾರೆ. ಈ ಎಲ್ಲಾ ಅಸಮಾಧಾನದ ಕಾರಣ ಹೈಕಮಾಂಡ್ ನಾಯಕರು ಹಾವೇರಿ ಸಮಾವೇಶದಿಂದ ದೂರ ಉಳಿದರು ಎಂದು ಅಂದಾಜಿಸಲಾಗಿದೆ.

ಸಮಾವೇಶದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ನಮ್ಮ ಸರ್ಕಾರ ಬಂದು 2 ವರ್ಷ 9 ತಿಂಗಳಾಯ್ತು. ನಾವು ಕೊಟ್ಟ ಭರವಸೆಗಳಲ್ಲಿ 243 ಭರವಸೆಗಳನ್ನು ಈಡೇರಿಸಿದ್ದೇವೆ. ಇನ್ನುಳಿದ ಅವಧಿಯಲ್ಲಿ ಬಾಕಿ ಭರವಸೆಗಳನ್ನೂ ಈಡೇರಿಸಲಾಗುವುದು. 2023-18 ರಲ್ಲೂ ಕೊಟ್ಟ ಭರವಸೆಗಳನ್ನೆಲ್ಲಾ ಈಡೇರಿಸಿ, ಪ್ರಣಾಳಿಕೆಯಲ್ಲಿ ಇಲ್ಲದ 30 ಭರವಸೆಗಳನ್ನು ಈಡೇರಿಸಿ “ನುಡಿದಂತೆ ನಡೆದು” ದಾಖಲೆ ಮಾಡಿದ್ದೇವೆ ಎಂದು ಹೇಳಿದ್ದರು.

ಅಧಿಕಾರ ಇದ್ದಾಗ ಕೊಟ್ಟ ಭರವಸೆ ಈಡೇರಿಸದ ಬಿಜೆಪಿ ಈಗ ನಮ್ಮ ಖಜಾನೆ ಖಾಲಿ ಆಗಿದೆ ಎನ್ನುವ ಸುಳ್ಳು ಪ್ರಚಾರದಲ್ಲಿ ನಿರತವಾಗಿದೆ. ಇಲ್ಲಿಯವರೆಗೂ ಗ್ಯಾರಂಟಿಗಳ ಮೂಲಕ 1,18,000 ಕೋಟಿ ರೂಪಾಯಿಗಳನ್ನು ನೇರವಾಗಿ ರಾಜ್ಯದ ಜನರಿಗೆ ತಲುಪಿಸಿದ್ದೇವೆ ಎಂದು ತಿಳಿಸಿದ್ದರು.

ಸಮಾವೇಶದಲ್ಲಿ ಮಾತನಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ಸರ್ಕಾರದ 1000 ದಿನಗಳ ಸಾಧನೆ, ರಾಜ್ಯದಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ. ನಿಮ್ಮ ಋಣ ತೀರಿಸಲು ಇಲ್ಲಿಗೆ ಬಂದಿದ್ದೇವೆ. ನಿಮ್ಮ ಕೆಲಸ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ನುಡಿದಂತೆ ನಡೆದು ನಿಮ್ಮ ಆಶೀರ್ವಾದ ಪಡೆಯಲಿಕ್ಕೆ ಇಲ್ಲಿಗೆ ನಾವು ಬಂದಿದ್ದೇವೆ ಎಂದು ಹೇಳಿದ್ದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular